ದೇವನಹಳ್ಳಿ ಭೂಮಿ ಸ್ವಾಧೀನ ಅಧಿಸೂಚನೆ ರದ್ದು

ದೇವನಹಳ್ಳಿ: ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿ ವ್ಯಾಪ್ತಿಯ 13 ಗ್ರಾಮಗಳ 1,777 ಎಕರೆ ಕೃಷಿ ಭೂಮಿ ಸ್ವಾಧೀನ ಅಧಿಸೂಚನೆ ರದ್ದುಪಡಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ಬೆಂಗಳೂರಿನಲ್ಲಿ ಘೋಷಣೆ ಮಾಡುತ್ತಲೇ ರೈತರು ಮತ್ತು ಹೋರಾಟಗಾರರ ಸಂಭ್ರಮ ಮೇರೆ ಮೀರಿತ್ತು.

ಬೆಂಗಳೂರಿನಿಂದ ದೇವನಹಳ್ಳಿಗೆ ಬಂದ ರೈತ ಹೋರಾಟಗಾರರು ತೆರದ ವಾಹನದಲ್ಲಿ ಜೈಕಾರ ಕೂಗುತ್ತಾ ಸಂಭ್ರಮಾಚರಣೆ ಮಾಡಿದರು. ಅವರೊಂದಿಗೆ ಚನ್ನರಾಯಪಟ್ಟಣದಿಂದ ಬಂದಿದ್ದ ನೂರಾರು ರೈತರು, ಧರಣಿನಿರತರು ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡರು.

ದೇವನಹಳ್ಳಿಯ ಬೈಪಾಸ್ ರಸ್ತೆಯಲ್ಲಿರುವ ಕೆಂಪೇಗೌಡ, ಟಿಪ್ಪು ಸುಲ್ತಾನ್‌, ತಾಲ್ಲೂಕು ಕಚೇರಿ ಆವರಣದಲ್ಲಿರುವ ಡಾ.ಬಿ.ಆರ್‌. ಅಂಬೇಡ್ಕರ್ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿದರು. ಅಲ್ಲಿಂದ ಪ್ರವಾಸಿ ಮಂದಿರಕ್ಕೆ ತೆರಳಿ ಮಳೆಯನ್ನೂ ಲೆಕ್ಕಿಸದೆ ತಮಟೆ ವಾದನಕ್ಕೆ ತಕ್ಕಂತೆ ಕುಣಿದು, ಕುಪ್ಪಳಿಸಿದರು.

ರೈತ ಹಾಗೂ ಪ್ರಗತಿಪರ ಸಂಘಟನೆಗಳ ಸದಸ್ಯರು, ಕಮ್ಯುನಿಸ್ಟ್ ಪಕ್ಷದ ಪದಾಧಿಕಾರಿಗಳು, ಸಾಹಿತಿಗಳು, ಕಲಾವಿದರು ರೈತರೊಂದಿಗೆ ಹಸಿರು ಶಾಲು ಕೈಯಲ್ಲಿ ಹಿಡಿದು ಬೀಸುತ್ತ ನೃತ್ಯ ಮಾಡಿದರು. ‘ರೈತರ ಭೂಮಿ ಉಳಿದಿದೆ’ ಎಂದು ಘೋಷಣೆ ಕೂಗಿ ಸಂಭ್ರಮಿಸಿದರು.

‘ಕಳೆದ 1,198 ದಿನಗಳಿಂದ ರೈತರು ಕಾಪಿಟ್ಟುಕೊಂಡು ಬಂದ ಹೋರಾಟದ ಕಿಚ್ಚಿಗೆ ಇಂದು ನ್ಯಾಯ ದೊರೆತಿದೆ. ರೈತರ ಸಾಂಘಿಕ ಹೋರಾಟಕ್ಕೆ ಸಂದ ಐತಿಹಾಸಿಕ ಜಯ ಇದಾಗಿದೆ. ರೈತರು ಒಗ್ಗಟ್ಟಾಗಿ ಮುನ್ನಡೆದರೆ ಏನೆಲ್ಲಾ ಸಾಧ್ಯ ಎಂಬುದನ್ನು ಈ ಹೋರಾಟ ಮತ್ತೊಮ್ಮೆ ನಿರೂಪಿಸಿದೆ’ ಎಂದು ರಾಜ್ಯ ರೈತ ಸಂಘದ ನಾಯಕಿ ಚುಕ್ಕಿ ನಂಜುಂಡಸ್ವಾಮಿ ಸುದ್ದಿಗಾರರಿಗೆ ತಿಳಿಸಿದರು.

ಮೂರು ವರ್ಷ ತಪ್ಪಸ್ಸಿನಂತೆ ಚನ್ನರಾಯಪಟ್ಟಣ ರೈತರು ಮಾಡಿದ ಹೋರಾಟ ಕಾರ್ಪೊರೇಟ್‌ ಮದಗಜವನ್ನು ಕಟ್ಟಿ ಹಾಕಿದೆ. ಈ ಹೋರಾಟ ದೇಶದ ಇಡೀ ರೈತ, ಕಾರ್ಮಿಕ ಮತ್ತು ಮಹಿಳಾ ಸಮೂಹಕ್ಕೆ ಸ್ಫೂರ್ತಿ ತುಂಬಲಿದೆ ಎಂದರು.

ಒಂದು ಕಡೆ ರೈತರು ಮತ್ತು ಮತ್ತೊಂದೆಡೆ ರಾಜಕಾರಣಿಗಳು, ಕಾರ್ಪೊರೇಟ್‌ ಕಂಪನಿಗಳ ಈ ಹೋರಾಟದಲ್ಲಿ ಅಂತಿಮವಾಗಿ ರೈತ ಸಮೂಹಕ್ಕೆ ಜಯವಾಗಿದೆ. ರೈತಶಕ್ತಿಯ ಮುಂದೆ ಆಳುವ ಸರ್ಕಾರ ಮಣಿದಿದೆ. ರೈತರ ಬೇಡಿಕೆಗೆ ಮನ್ನಣೆ ನೀಡಿದೆ. ಬಲವಂತದ ಭೂಸ್ವಾಧೀನ ಕರ್ನಾಟಕದಲ್ಲಿ ಇನ್ನು ಮುಂದೆ ನಡೆಯುವುದಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಯು. ಬಸವರಾಜ್ ಹೇಳಿದರು.

ಮಾರೇಗೌಡ, ನಂಜಪ್ಪ, ರಮೇಶ್‌ ಚಿಮಾಚನಹಳ್ಳಿ, ವೆಂಕಟರಮಣಪ್ಪ, ಪ್ರಭಾ ಬೆಳವಂಗಲ, ಮೋಹನ್‌, ಗೋಪಾಲ್‌, ಪ್ರಮೋದ್‌, ನಂದನ್‌, ಟಿ.ಯಶವಂತ್‌, ವಿನೋದ್ ಗೌಡ ಸೇರಿದಂತೆ ಚನ್ನರಾಯಪಟ್ಟಣ ಗ್ರಾಮದ 13 ಹಳ್ಳಿಗಳ ರೈತರು ಇದ್ದರು. ಚನ್ನರಾಯಪಟ್ಟಣ ಭೂ ಸ್ವಾಧೀನ ರದ್ದು ಮಾಡಿದ ರಾಜ್ಯ ಸರ್ಕಾರಕ್ಕೆ ವಿವಿಧ ಸಂಘಟನೆಯ ಮುಖ್ಯಸ್ಥರು ಧನ್ಯವಾದ ತಿಳಿಸಿದರು.

‘ದಲಿತನ ನಾಯಕತ್ವ ಒಪ್ಪಿಕೊಂಡ ರೈತರು’: ಚನ್ನರಾಯಪಟ್ಟಣದ ಗೆಲುವು ಈ ನಾಡಿನ ಜನ ಚಳವಳಿಯ ಗೆಲುವಾಗಿದೆ. ನಾನು ದಲಿತರ ಹುಡುಗ. ದಲಿತ ಸಂಘರ್ಷ ಸಮಿತಿಯ ಪ್ರಾಡಕ್ಟ್. ನನ್ನ ನಾಯಕತ್ವವನ್ನು ಎಲ್ಲ ಸಮುದಾಯಗಳೂ ಒಪ್ಪಿದವು. ಆ ಕಾರಣಕ್ಕೆ ಎಲ್ಲ ಜನವರ್ಗ ಮತ್ತು ರೈತಾಪಿ ಕುಟುಂಬವನ್ನು ಸ್ಮರಿಸುತ್ತೇನೆ. ನನ್ನೊಳಗೆ ನೀಲಿ ಇತ್ತು. ಈಗ ಕೆಂಪು ನನ್ನ ರಕ್ತವಾಗಿದೆ. ಹಸಿರು ನನ್ನ ಹೊದಿಕೆಯಾಗಿದೆ. ಅದು ಮತ್ತಷ್ಟು ಕಾವು ಉಳಿಸಿಕೊಳ್ಳಲಿ. ಈ ನಾಡಿನ ಜನಚಳವಳಿಗಳ ಉಚ್ಛ್ರಾಯ ಸ್ಥಿತಿ ನಿರ್ಮಾಣವಾಗಲಿ ಎಂದು ದಸಂಸ ಮುಖಂಡ ಕಾರಹಳ್ಳಿ ಶ್ರೀನಿವಾಸ್ ಆಶಯ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *