ನವದೆಹಲಿ: ಪ್ರಜಾಪ್ರಭುತ್ವ ಜೀವಂತವಾಗಿರಬೇಕು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಶರದ್ ಪವಾರ್ ಭೇಟಿ ಬಳಿಕ ಮಾತನಾಡಿದ ಅವರು, ದೆಹಲಿ ಭೇಟಿ ಫಲಪ್ರದವಾಗಿದೆ ಎಂದಿದ್ದಾರೆ.
ರಾಜಕೀಯ ಉದ್ದೇಶಕ್ಕಾಗಿ ನಾವು ಭೇಟಿಯಾಗಿದ್ದೆವು. ಎಷ್ಟೇ ಆದರೂ ದೇಶದ ಪ್ರಜಾಪ್ರಭುತ್ವ ಉಳಿಯಬೇಕು. ಪ್ರಜಾಪ್ರಭುತ್ವ ಉಳಿಸಿ-ದೇಶ ಉಳಿಸಿ ನಮ್ಮ ಘೋಷವಾಕ್ಯವಾಗಿದೆ. ಪ್ರತಿ ಎರಡು ತಿಂಗಳಿಗೊಮ್ಮೆ ದೆಹಲಿಗೆ ಭೇಟಿ ನೀಡುವುದಾಗಿ ದೀದಿ ಹೇಳಿದ್ದಾರೆ. ದೇಶ ಅಭಿವೃದ್ಧಿಯಾಗಬೇಕಾಗಿದೆ. ನಮ್ಮ ಜನರಿಗಾಗಿ ಅಭಿವೃದ್ಧಿ ಬೇಕಾಗಿದೆ. ಪೆಟ್ರೋಲ್, ಅಡುಗೆ ಅನಿಲ ದರ ಸಾರ್ವಕಾಲಿಕ ಏರಿಕೆ ಕಂಡಿದೆ. ಹಣದುಬ್ಬರ ದರ ಕೂಡ ಗಗನಕ್ಕೇರಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಬ್ಯಾನರ್ಜಿ ಟೀಕಾ ಪ್ರಹಾರ ನಡೆಸಿದರು.