ಬೆಂಗಳೂರು: ಕನ್ನಡದ ಹಿರಿಯ ಸಾಹಿತಿ, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರು, ಕನ್ನಡ ಚಳುವಳಿಯ ದಿಟ್ಟ ಹೋರಾಟಗಾರರಾದ ಚಂದ್ರಶೇಖರ ಪಾಟೀಲ(ಚಂಪಾ) ಅವರು ಇಂದು ವಿಧಿವಶರಾಗಿದ್ದಾರೆ.
ಚಂಪಾ ಅವರಿಗೆ 83 ವರ್ಷ ವಯಸ್ಸಾಗಿತ್ತು. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ಮುಂಜಾನೆ 6.30ರ ವೇಳೆಗೆ ಬೆಂಗಳೂರಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಚಂಪಾ ಅವರಿಗೆ ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಇದ್ದಾರೆ. ಬೆಂಗಳೂರಿನಲ್ಲಿ ಸೋಮವಾರ ಸಂಜೆ ಅಂತ್ಯಕ್ರಿಯೆ ನಡೆಯಲಿದೆ.
ಚಂದೃಶೇಖರ ಪಾಟೀಲ ಅವರು 1939ರಲ್ಲಿ ಹಾವೇರಿ ಜಿಲ್ಲೆಯ ಹತ್ತಿಮತ್ತೂರಿನಲ್ಲಿ ಜನಿಸಿದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಕೂಡ ಅವರು ಕೆಲಸ ಮಾಡಿದ್ದರು. ಕನ್ನಡದ ವಿಚಾರಗಳು ಬಂದಾಗ ಮುಂಚೂಣಿಯಲ್ಲಿ ನಿಂತು ಕನ್ನಡ ಪರ ಹೋರಾಟಗಳ ಭಾಗವಾಗುತ್ತಿದ್ದರು. 2017ರಲ್ಲಿ ಮೈಸೂರಿನಲ್ಲಿ ನಡೆದ ಅಖಿಲ ಭಾರತೀಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿಯೂ ಆಯ್ಕೆಯಾಗಿದ್ದರು. ಗೋಕಾಕ್ ಚಳವಳಿಯಲ್ಲಿಯೂ ಮುಂಚೂಣಿಯಲ್ಲಿ ಕೆಲಸ ಮಾಡಿದ್ದ ಚಂಪಾ ಅವರು ಕನ್ನಡಕ್ಕೆ ಎಲ್ಲಿಯೇ ಅನ್ಯಾಯವಾದರೂ ಧ್ವನಿ ಎತ್ತುತ್ತಿದ್ದರು.