ಹುಬ್ಬಳ್ಳಿ: ಮಹದಾಯಿದೂ ಈಗಾಗಲೇ ನೋಟಿಫಿಕೇಷನ್ ಆಗಿದೆ. ಪರಿಸರ ಇಲಾಖೆಯಿಂದ ಅನುಮತಿ ಪಡೆಯಬೇಕು. ಆದರೆ ನಮ್ಮ ರಾಜ್ಯದಿಂದ ಆಯ್ಕೆಯಾಗಿ ಹೋಗಿರುವ ಬಿಜೆಪಿ ಎಂಪಿಗಳು ಈ ವಿಚಾರದಲ್ಲಿ ಏನು ಮಾಡುತ್ತಿಲ್ಲ ಎಂದು ವಿಪಕ್ಷನಾಯಕ ಸಿದ್ದರಾಮಯ್ಯ ಬಿಜೆಪಿ ಎಂಪಿಗಳ ವಿರುದ್ಧ ಕಿಡಿಕಾರಿದರು.
ಕುಂದಗೋಳದ ಸಂಶಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮಾತೆದ್ದಿದ್ರೆ ಸಾಕು ಬಿಜೆಪಿಯವರು ಡಬಲ್ ಇಂಜಿನ ಸರ್ಕಾರ ಎನ್ನುತ್ತಾರೆ. ರಾಜ್ಯದಿಂದ 25 ಜನ ಎಂಪಿಗಳು ಆಯ್ಕೆಯಾಗಿ ಹೋಗಿದ್ದಾರೆ. ಹಾಗಿದ್ಮೇಲೆ ಯಾಕೆ ಇಲ್ಲಿನ ಎಂಪಿಗಳು ಅಲ್ಲಿ ಒತ್ತಡ ತಂದು ಪರಿಸರ ಇಲಾಖೆಯ ಅನುಮತಿ ಪಡೆಯಲು ಆಗುತ್ತಿಲ್ಲ. ಈ ಬಿಜೆಪಿ ಡಬಲ್ ಇಂಜಿನ್ ಸರ್ಕಾರದ ನಿರ್ಲಕ್ಷ್ಯದಿಂದಾಗಿಯೇ ಮಹದಾಯಿ ಕೆಲಸ ಇನ್ನೂ ಪ್ರಾರಂಭವಾಗಿಲ್ಲ ಎಂದು ಕುಟುಕಿದರು.
ಮಹದಾಯಿ ಕೆಲಸ ಆರಂಭಿಸಲು ಅಗ್ರಹಿಸಿ ಜ.2 ರಂದು ರ್ಯಾಲಿ ಹಮ್ಮಿಕೊಳ್ಳಲಾಗಿದೆ: ಮಹದಾಯಿ ಕೆಲಸ ಪ್ರಾರಂಭ ಮಾಡುವಂತೆ ಅಗ್ರಹಿಸಿ ಬರುವ ಜನವರಿ 2 ರಂದು ಕಾಂಗ್ರೆಸ್ ಪಕ್ಷದ ವತಿಯಿಂದ ಬೃಹತ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಮಹದಾಯಿ ವಿಚಾರದಲ್ಲಿ ಬಿಜೆಪಿಯವರಿಗೆ ದಮ್ಮು ಇಲ್ಲ, ತಾಕತ್ ಇಲ್ಲ: ಮಹದಾಯಿ ಕಾರ್ಯ ಆರಂಭಿಸಲು ಬಿಜೆಪಿ ಸರ್ಕಾರಕ್ಕೆ ದಮ್ಮು ಇಲ್ಲ ತಾಕತ್ತು ಇಲ್ಲ. ಇವರು ಮಾತೆದ್ದರೆ ದಮ್ಮು ತಾಕತ್ ಬಗ್ಗೆ ಮಾತಾಡುತ್ತಾರೆ. ಈ ಭಾಗಕ್ಕೆ ಮಹದಾಯಿ ವಿಚಾರದಲ್ಲಿ ಏನಾದರೂ ಅನ್ಯಾಯವಾಗಿದ್ದರೆ ಅದೂ ಬಿಜೆಪಿಯವರಿಂದಲೇ ಹೊರತು ಬೇರೆ ಯಾರಿಂದಲೂ ಅಲ್ಲ. ಮಹದಾಯಿ ವಿಚಾರದಲ್ಲಿ ಬಿಜೆಪಿಯರು ಏನೂ ಮಾಡುತ್ತಿಲ್ಲ ಎಂದು ವ್ಯಂಗ್ಯವಾಡಿದರು.
ಬಿಜೆಪಿಯವರು ಇರುವಷ್ಟು ದಿನ ಕಮಾಯ್ ಮಾಡಿಕೊಳ್ಳುವ ಕಡೆ ಗಮನ ಹರಿಸುತ್ತಾರೆ: ಅವಧಿಗೂ ಮುನ್ನವೇ ರಾಜ್ಯ ವಿಧಾನಸಭಾ ಚುನಾವಣೆ ನಡೆಯುತ್ತಾ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಯವರು ಅಧಿಕಾರದಲ್ಲಿ ಇರುವುದು ಕೇವಲ ಇನ್ನೂ ಮೂರು ತಿಂಗಳು ಮಾತ್ರ. ಮಾರ್ಚನಲ್ಲಿ ಬಹುತೇಕ ಚುನಾವಣೆ ನೋಟಿಫಿಕೇಷನ್ ಆಗುತ್ತದೆ. ಹಾಗಾಗಿ ಅವರು ಅವಧಿಗೂ ಮುನ್ನ ಚುನಾವಣೆ ನಡೆಸುವುದಿಲ್ಲ. ಅಧಿಕಾರಲ್ಲಿ ಇರುವಷ್ಟು ದಿನ ಬಿಜೆಪಿಯವರು ಕಮಾಯ್ ಮಾಡಿಕೊಳ್ಳುವುದರ ಕಡೆ ಗಮನಹರಿಸುತ್ತಾರೆ ಎಂದು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.