ಬೆಂಗಳೂರು: ಕನ್ನಡಿಗರಿಗೆ ಅವಮಾನ ಮಾಡಿ, ನಮ್ಮ ತಾಯ್ನಾಡಿನ ಧ್ವಜವನ್ನು ಸುಟ್ಟ ಹೇಡಿಗಳಿಗೆ ಶಿಕ್ಷೆ ಆಗಲಿ ಎಂದು ನಟ ದರ್ಶನ್ ಅವರು ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಕನ್ನಡದ ಬಾವುಟಕ್ಕೆ ಬೆಂಕಿ ಇಟ್ಟ ಶಿವಸೇನೆಯ ಕಿಡಿಗೇಡಿಗಳ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು ಕಿಡಿಕೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಎಲ್ಲರೂ ಆಗ್ರಹಿಸಿದ್ದಾರೆ.
ನಟ ದರ್ಶನ್ ಅವರು ಸಹ ಇದಕ್ಕೆ ಪ್ರತಿಕ್ರಿಯೆ ನೀಡಿದ್ದು ‘ನಮ್ಮ ಕರುನಾಡ ಧ್ವಜ ಸುಟ್ಟ ಹೇಡಿಗಳಿಗೆ ತಕ್ಕ ಶಿಕ್ಷೆಯಾಗಲೇಬೇಕು. ನಿಜವಾಗಿ ಕನ್ನಡ ಪರ ಹೋರಾಟ ಮಾಡುವವರನ್ನು ಬಿಡುಗಡೆಗೊಳಿಸಿ. ಕನ್ನಡ ತಾಯಿ ತಾಯ್ನಾಡು ವಿಷಯಕ್ಕೆ ಈ ರೀತಿ ಅಪಮಾನ ಮಾಡಿರುವವರಿಗೆ ತಕ್ಕ ಪಾಠ ಕಲಿಸಲೇಬೇಕು. ದಯಮಾಡಿ ತಕ್ಕ ಕ್ರಮ ಕೈಗೊಳ್ಳಬೇಕಾಗಿ ವಿನಂತಿ’ ಎಂದು ನಟ ದರ್ಶನ್ ಟ್ವೀಟ್ ಮಾಡಿ ಮುಖ್ಯಮಂತ್ರಿಗಳಿಗೆ ಆಗ್ರಹಿಸಿದ್ದಾರೆ.
ಮುಂದೆ ಕನ್ನಡಿಗರ ಮನೆಗೆ ಬೆಂಕಿ ಇಡುತ್ತೇವೆ:
ಡಿಸೆಂಬರ್ 13 ರಂದು ಕನ್ನಡಪರ ಹೋರಾಟಗಾರರು ಎಂಇಎಸ್ ಮುಖಂಡ ದೀಪಕ್ ದಳವಿಗೆ ಘೇರಾವ್ ಹಾಕಿ ಮುಖಕ್ಕೆ ಮಸಿ ಬಳಿದಿದ್ದರು. ಇದನ್ನು ಖಂಡಿಸಿ ಎಂಇಎಸ್‌ನವರು ಪ್ರತಿಭಟನಾ ರ್‍ಯಾಲಿ ಮಾಡಿ ತಿಲಕ್‌ವಾಡಿ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ದೂರು ದಾಖಲಿಸಿದ್ದರು. ಪೊಲೀಸರು ಕನ್ನಡಪರ ಹೋರಾಟಗಾರ ಸಂಪತ್‌ಕುಮಾರ್ ಸೇರಿದಂತೆ ಇನ್ನಿಬ್ಬರನ್ನು ಬಂಧಿಸಿದ್ದಾರೆ. ಎಂಇಎಸ್ ಮುಖಂಡ ದೀಪಕ್ ದಳವಿ ಮುಖಕ್ಕೆ ಮಸಿ ಬಳಿದಿದ್ದನ್ನು ಖಂಡಿಸಿ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಪ್ರತಿಭಟನೆ ನಡೆಸಿ ಕನ್ನಡ ಧ್ವಜಕ್ಕೆ ಬೆಂಕಿ ಇಟ್ಟಿದ್ದಾರೆ.