ಕಾಂಗ್ರೆಸ್ ಸರಕಾರದ್ದು ದುರಾಡಳಿತದ ಸಾಧನೆ: ಡಾ.ಸಿ.ಎನ್.ಅಶ್ವತ್ಥನಾರಾಯಣ್ ಟೀಕೆ

ಬೆಂಗಳೂರು: ಕಾಂಗ್ರೆಸ್ ಸರಕಾರ ದುರಾಡಳಿತದ ಸಾಧನೆ ಮಾಡಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಅವರು ಆಕ್ಷೇಪಿಸಿದ್ದಾರೆ.

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರಿನಲ್ಲಿ ಕಾಂಗ್ರೆಸ್ಸಿಗರ ಸಾಧನಾ ಸಮಾವೇಶವನ್ನು ಪ್ರಸ್ತಾಪಿಸಿದರು. ಜನರನ್ನು ನಂಬಿಸಿ ಗರಿಷ್ಠ ಬಹುಮತ ಪಡೆದು ಆಡಳಿತಕ್ಕೆ ಬಂದ ಕಾಂಗ್ರೆಸ್ ಪಕ್ಷ ಜನರಿಗೆ ದ್ರೋಹ, ಅನ್ಯಾಯ, ಭ್ರಷ್ಟಾಚಾರವನ್ನೇ ಮಾಡುತ್ತ ಬಂದಿದೆ. ಪ್ರಾರಂಭದ ದಿನದಿಂದ ನೂರಾರು ಹಗರಣ ಮಾಡಿದೆ. ಒಂದೇ ಒಂದು ಒಳ್ಳೆಯ ಕೆಲಸ ಮಾಡಿಲ್ಲ ಎಂದು ಟೀಕಿಸಿದರು.

ಹಿರಿಯರಾದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಲೆಗೆ ಹೊಡೆದಂತೆ ಸುಳ್ಳು ಹೇಳಲು ಸಮಾವೇಶ ಮಾಡುತ್ತಿದ್ದಾರೆ. ಇವರಿಗೆ ಏನಾದರೂ ಒಂದು ಆತ್ಮಸಾಕ್ಷಿ ಬೇಕಲ್ಲವೇ ಎಂದು ಪ್ರಶ್ನಿಸಿದರು. ಸುಳ್ಳನ್ನೇ ಸತ್ಯವೆಂದು ಹೇಳಿಕೊಂಡು ಸಾಧನಾ ಸಮಾವೇಶ ಮಾಡುತ್ತಿದ್ದಾರೆ. ನಿವೇಶನ ವಾಪಸ್ ಮಾಡಿದ ಮುಡಾ ಹಗರಣ, ಹಣ ಅವ್ಯವಹಾರ ಆದುದನ್ನು ಸ್ವತಃ ಸಿಎಂ ಒಪ್ಪಿಕೊಂಡ ವಾಲ್ಮೀಕಿ ನಿಗಮದ ಹಗರಣ ಸಂಬಂಧ ಏನು ಹೇಳುತ್ತಾರೆ? ಅಧಿಕಾರಿಗಳ ಆತ್ಮಹತ್ಯೆ ಬಗ್ಗೆ ಹೇಳುತ್ತಾರಾ? ಪ್ರತಿಯೊಂದರಲ್ಲೂ ಕಮಿಷನ್, ಹಗಲುದರೋಡೆ ವಿಚಾರ ತಿಳಿಸುತ್ತಾರಾ ಎಂದು ಕೇಳಿದರು.

ಕೆಲವೆಡೆ ಕಮಿಷನ್ ಶೇ 100ಕ್ಕೆ ಏರಿದೆ. ಇನ್ನೂ ಕೆಲವು ಕಡೆ ಶೇ 80, ಶೇ 60 ಭ್ರಷ್ಟಾಚಾರ ಇವರದು. ದುಡ್ಡಿಲ್ಲದೇ ವರ್ಗಾವಣೆ ಇಲ್ಲ. ಈ ಸಂಬಂಧ ಎಷ್ಟೋ ಜನರು ದಲಿತ ವರ್ಗಕ್ಕೆ ಸೇರಿದಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವಿವರಿಸಿದರು. ಇದು ಕೊಲೆಗಡುಕರ, ಸಾವಿನ ಸರಕಾರ ಎಂದು ದೂರಿದರು.

ಆರ್‍ಸಿಬಿ ವಿಜಯೋತ್ಸವದ ವೇಳೆ ಕಾಲ್ತುಳಿತ- 11 ಜನರ ಸಾವು ಕುರಿತು ಮಾತನಾಡಿದ ಅವರು, ಕಾನೂನು- ಸುವ್ಯವಸ್ಥೆ ಕಾಪಾಡುವುದು ಯಾರ ಜವಾಬ್ದಾರಿ? ಅನುಮತಿ ಇಲ್ಲದೇ ಇದ್ದಲ್ಲಿ ಉಪ ಮುಖ್ಯಮಂತ್ರಿ ಸ್ಟೇಡಿಯಂಗೆ ಹೋದದ್ದು ಯಾಕೆ ಎಂದು ಕೇಳಿದರು. ಜನರು ಸಾಯುತ್ತಿದ್ದರೂ ಅವರು ಕಪ್‍ಗೆ ಮುತ್ತು ಕೊಡುತ್ತ ಇದ್ದರಲ್ಲವೇ ಎಂದು ಪ್ರಶ್ನಿಸಿದರು. ಜನರು ಸಾಯುವುದು ಗೊತ್ತಿದ್ದರೂ ಮುಖ್ಯಮಂತ್ರಿಗಳು ಹೋಟೆಲ್‍ನಲ್ಲಿ ಮಸಾಲೆ ದೋಸೆ ತಿನ್ನುತ್ತಿದ್ದರು ಎಂದು ಆಕ್ಷೇಪಿಸಿದರು.

ಕಾರ್ಯಕ್ರಮಕ್ಕೆ ಅನುಮತಿ ಇಲ್ಲದಿದ್ದರೂ ವಿಧಾನಸೌಧದ ಬಳಿ ವಿಜಯೋತ್ಸವ ನಡೆಸಿದ್ದೇಕೆ? ಈ ಸರಕಾರವನ್ನೂ ಆರ್‍ಸಿಬಿ, ಕೆಸಿಎ, ಡಿಎನ್‍ಎ ನಡೆಸುತ್ತಿದೆಯೇ ಎಂದು ಕೇಳಿದರು. ಇವರಿಗೆ ನಾಚಿಕೆ ಆಗಬೇಕು. ಜನರ ಜೀವ ತೆಗೆದುಕೊಳ್ಳುವುದೇ ಇವರ ಸಾಧನೆ ಎಂದು ಟೀಕಿಸಿದರು. ಇವರು ಅಧಿಕಾರದಲ್ಲಿ ಇರುವ ಯಮದೂತರು ಎಂದರು. ವರದಿ ಕೊಟ್ಟಿರುವುದು ನಿಜಕ್ಕೂ ಖಂಡನೀಯ; ಪೊಲೀಸ್ ಅಧಿಕಾರಿಗಳು ಕಾರ್ಯಕ್ರಮ ಬೇಡ ಎಂಬ ಸ್ಪಷ್ಟ ನಿಲುವು ತೆಗೆದುಕೊಂಡಿದ್ದರು. ವಿರಾಟ್ ಕೊಯ್ಲಿ ಮೇಲೆ ಜವಾಬ್ದಾರಿ ಹೊರಿಸಿದ್ದಾರೆ. ಈಗ ಇಂಡಸ್ತ್ರಿಗಳು ಓಡಿ ಹೋಗುತ್ತಿವೆ. ಇನ್ನು ಯಾವುದೇ ಕ್ರೀಡೆಗಳು ನಡೆಯದಂತೆ ಆಗಲಿದೆ ಎಂದು ತಿಳಿಸಿದರು.

ಇವರು ಎಲ್ಲರಿಗೂ ಭಯ ಹುಟ್ಟಿಸಿದ್ದಾರೆ. ನಮ್ಮ ರಾಜ್ಯಕ್ಕೆ ಕಳಂಕ ತರುವ, ತಲೆ ತಗ್ಗಿಸುವ ಕೆಲಸವನ್ನು ಮಾಡಿದ್ದಾರೆ. ಇದು ಹಗರಣಗಳ ರಾಜರ ಸರಕಾರ (ಸ್ಕ್ಯಾಮ್ ಕಿಂಗ್ಸ್) ಎಂದು ಆರೋಪಿಸಿದರು.
ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್ ಮತ್ತು ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್, ಬಿಜೆಪಿ ಎಸ್.ಟಿ. ಮೋರ್ಚಾ ರಾಜ್ಯ ಅಧ್ಯಕ್ಷ ಬಂಗಾರು ಹನುಮಂತು ಅವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *