ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಗೆ ಕೆಪಿಸಿಸಿ ಅಧ್ಯಕ್ಷರು ಆಗಿರುವ ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು ಹ್ಯಾಟ್ರಿಕ್ ಹಿರೋ ಡಾ. ಶಿವರಾಜ್ ಕುಮಾರ್ ಅವರಿಗೆ ಕಾಂಗ್ರೆಸ್ ನಿಂದ ಟಿಕೆಟ್ ಆಫರ್ ನೀಡಿದ್ದಾರೆ, ಆದರೆ ಅದನ್ನು ಅಷ್ಟೇ ನಯವಾಗಿ ಶಿವರಾಜ್ ಕುಮಾರ್ ನಿರಾಕರಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಈಡಿಗ ಸಮುದಾಯದ ಬೃಹತ್ ಸಮ್ಮೇಳನದಲ್ಲಿ ಡಿ.ಕೆ ಶಿವಕುಮಾರ್, ಪಾರ್ಲಿಮೆಂಟಿಗೆ ತಯಾರಾಗಲು ಶಿವಣ್ಣಗೆ ಹೇಳಿದ್ದೇನೆ, ಅವರು ಯಾವ ಕ್ಷೇತ್ರದಿಂದ ಸ್ಪರ್ಧಿಸಿದರೂ ಟಿಕೆಟ್ ನೀಡುತ್ತೇವೆ ಎಂದು ತಿಳಿಸಿದರು.
ಶಿವಣ್ಣ ಈಗಾಗಲೇ ಐದಾರು ಸಿನಿಮಾಗಳನ್ನು ಒಪ್ಪಿಕೊಂಡಿದ್ದು, ಅವುಗಳ ಚಿತ್ರೀಕರಣ ಮುಗಿಯಬೇಕು ಎಂದಿದ್ದಾರೆ. ಚಿತ್ರ ಯವಾಗ ಬೇಕಾದರೂ ಮಾಡಬಹುದು, ಆದರೆ ಸಂಸತ್ ಗೆ ಹೋಗುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ ಎಂದು ಹೇಳಿದ್ದೇನೆ
ಅವರ ನಿರ್ಧಾರಕ್ಕೆ ಎದುರು ನೋಡುತ್ತಿದ್ದೇನೆ ಎಂದು ಹೇಳಿದರು.
ನಂತರ ಮಾತನಾಡಿದ ಶಿವರಾಜ್ ಕುಮಾರ್, ನಮ್ಮದೇನಿದ್ದರೂ ಮೇಕಪ್ ಹಾಕೋದು ಸಿನಿಮಾ ಮಾಡೋದು. ನಾನು ಎಂದಿಗೂ ರಾಜಕೀಯಕ್ಕೆ ಬರುವುದಿಲ್ಲ, ನಮ್ಮ ತಂದೆ ಬಣ್ಣ ಹಚ್ಚಿ ನಟನೆ ಮಾಡುವುದನ್ನು ಕೇಳಿ ಕೊಟ್ಟಿದ್ದಾರೆ ಎಂದು ತಿಳಿಸಿದರು.
ಅದೇ ಸಾಕು ನಮಗೆ. ನಮ್ಮ ತಂದೆ ಕೊಟ್ಟಿರುವ ಬಳುವಳಿ ಬಣ್ಣ ಹಚ್ಚೋದನ್ನು ಮುಂದುವರಿಸಿಕೊಂಡು ಹೋಗುತ್ತೇನೆ. ರಾಜಕೀಯ ನಮಗೆ ಬೇಡ ಎಂದು ಸ್ಪಷ್ಟವಾಗಿ ಹೇಳಿದರು.
ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಮಗಳು ನಮ್ಮನೆ ಸೊಸೆಯಾಗಿದ್ದಾರೆ. ಗೀತಾ ಬೇಕಾದ್ರೆ ರಾಜಕೀಯಕ್ಕೆ ಹೋಗಲಿ, ಅವರಿಗೆ ಸಪೋರ್ಟ್ ಮಾಡೋದು ಗಂಡನಾಗಿ ನನ್ನ ಕರ್ತವ್ಯ ಎಂದು ಶಿವಣ್ಣ ಹೇಳಿದರು.