ಅಪರೂಪದ ಕಥಾಹಂದರ ಹೊಂದಿರುವ “ಫಾದರ್” ಚಿತ್ರ ಇದೀಗ ಪ್ರೇಕ್ಷಕರ ಮುಂದೆ ಬರಲು ತಯಾರಿ

ಫಾದರ್ ಅಂದಾಕ್ಷಣ, ನೆನಪಾಗೋದೇ ಬೆಚ್ಚನೆಯ ಪ್ರೀತಿ. ಅದೊಂದು ರೀತಿ ಕಾಳಜಿಯ ಸಂಕೇತ. ಸುಂದರ ಬದುಕು ರೂಪಿಸುವ ಜೀವ. ಅಂತಹ ಫಾದರ್ ಕುರಿತ ಈಗಾಗಲೇ ಹಲವು ಕಥೆಗಳಿವೆ. ಸಿನಿಮಾಗಳೂ ಅಪ್ಪಳಿಸಿವೆ. ಆ ಸಾಲಿಗೆ ಅಪರೂಪದ ಕಥಾಹಂದರ ಹೊಂದಿರುವ ಆರ್.ಸಿ.ಸ್ಟುಡಿಯೋಸ್ ನಿರ್ಮಾಣದ “ಫಾದರ್” ಚಿತ್ರ ಇದೀಗ ಪ್ರೇಕ್ಷಕರ ಮುಂದೆ ಬರಲು ತಯಾರಿ ನಡೆಸುತ್ತಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ಸ್ ತಯಾರಿಯಲ್ಲಿರುವ ಸಿನಿಮಾ ತೆರೆಗೆ ಬರಲು ಸಜ್ಜಾಗುತ್ತಿದೆ.

ಜೂನ್ 12 “ಫಾದರ್” ಚಿತ್ರದ ನಾಯಕ ಡಾರ್ಲಿಂಗ್ ಕೃಷ್ಣ ಅವರ ಹುಟ್ಟುಹಬ್ಬ. ನಾಯಕನ ಹುಟ್ಟುಹಬ್ಬಕ್ಕೆ ವಿಭಿನ್ನ ಹಾಗೂ ವಿಶೇಷ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಆರ್ ಸಿ ಸ್ಟುಡಿಯೋಸ್ ಹಾಗೂ ಚಿತ್ರತಂಡ ಡಾರ್ಲಿಂಗ್ ಕೃಷ್ಣ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದೆ.

ಆರ್.ಸಿ. ಸ್ಟುಡಿಯೋಸ್ ಮೂಲಕ ಹೊರಬರುತ್ತಿರುವ ಈ “ಫಾದರ್” ಚಿತ್ರವು ನೋಡುಗರಿಗೊಂದು ಭಾವುಕ ಪಯಣಕ್ಕೆ ಕರೆದೊಯ್ಯುವ ಹೃದಯ ಸ್ಪರ್ಶಿ ಚಿತ್ರ.

“ಫಾದರ್” ಅಂದರೇನೆ ಅದೊಂದು ಶಕ್ತಿ. ಅಂತಹ ಶಕ್ತಿಯುತ ಸಿನಿಮಾದ ಹೈಲೆಟ್ ಅಂದರೆ ಪ್ರಕಾಶ್ ರಾಜ್. ಅವರೇ ಇಲ್ಲಿ “ಫಾದರ್”. ಇನ್ನು, ಡಾರ್ಲಿಂಗ್ ಕೃಷ್ಣ ಕೂಡ ಪ್ರಮುಖ ಆಕರ್ಷಣೆ. ಇವರಿಬ್ಬರ ಕಾಂಬೋದಲ್ಲಿ ಬರುತ್ತಿರುವ “ಫಾದರ್” ಈಗಾಗಲೇ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಅದಕ್ಕೆ ಕಾರಣ, “ಲವ್ ಮಾಕ್ಟೇಲ್” ಜೋಡಿ ಇಲ್ಲೂ ಒಂದಾಗಿದೆ. ಡಾರ್ಲಿಂಗ್ ಕೃಷ್ಣ ಅವರ ಜೊತೆ ಅಮೃತಾ ಅಯ್ಯಂಗಾರ್ ಇದ್ದಾರೆ ಎನ್ನುವುದು ಮತ್ತೊಂದು ಸ್ಪೆಷಲ್. ಇವರೊಂದಿಗೆ ಅನೇಕ ನುರಿತ ಕಲಾವಿದರು ಚಿತ್ರದ ತಾರಾಬಳಗದಲ್ಲಿದ್ದಾರೆ. ಅಲ್ಲಿಗೆ “ಫಾದರ್” ಸಿನಿಮಾದ ಕುತೂಹಲ ಮತ್ತಷ್ಟು ಹೆಚ್ಚಿದೆ.

ಇಲ್ಲಿ ಸಕ್ಸಸ್ ಫುಲ್ ನಟ, ನಟಿಯರು ಒಂದೇ ಫ್ರೇಮ್ ನಲ್ಲಿದ್ದಾರೆಂದ ಮೇಲೆ ಆ ನಿರೀಕ್ಷೆ ಮತ್ತಷ್ಟು ಹೆಚ್ಚಿರುವುದು ಸುಳ್ಳಲ್ಲ.

ಇದೊಂದು ನಿರೀಕ್ಷೆಯ ಸಿನಿಮಾ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ನಿರತವಾಗಿರುವ ಸಿನಿಮಾ ಸಾಕಷ್ಟು ಕುತೂಹಲ ಹೊಂದಿದೆ. ಅದಕ್ಕೆ ಕಾರಣ ಕಥೆ ಮತ್ತು ಪಾತ್ರಗಳು.

ಆರ್.ಚಂದ್ರು ಅವರಿಗೆ ಎಮೋಷನಲ್ ಕಂಟೆಟ್ ಸಿನಿಮಾಗಳ ಮೇಲೆ ಹೆಚ್ಚು ಒಲವು. ಚಂದ್ರು ಅವರ ನಿರ್ಮಾಣದ ಚಿತ್ರಗಳಿಗೆ ಅವರದೆ ಆದ ಅಭಿಮಾನಿ ಬಳಗ ಇದೆ. “ಫಾದರ್” ಕೂಡ ಅವರ ನಿರೀಕ್ಷೆಯನ್ನು ಹೆಚ್ಚಿಸಿದೆ. ಅವರು ನಿರ್ದೇಶಿಸಿದ ಮೊದಲ “ತಾಜ್ ಮಹಲ್” ಚಿತ್ರ ಹಿಟ್ ಆಗಿತ್ತು. ಆ ಬಳಿಕ ಬಂದ “ಚಾರ್​ ಮಿನಾರ್” ಕೂಡ ಸೂಪರ್ ಹಿಟ್ ಆಯ್ತು. “ಪ್ರೇಮ್ ಕಹಾನಿ” ಕೂಡ ಅದ್ಭುತ ಕಂಟೆಂಟ್ ಸಿನಿಮಾ ಆಗಿತ್ತು. ಈಗ “ಫಾದರ್” ಕೂಡ ಒಂದೊಳ್ಳೆಯ ಸಿನಿಮಾ ಆಗಿ ಹೊರಹೊಮ್ಮುತ್ತೆ ಎಂಬ ಲೆಕ್ಕಾಚಾರ ಇದೆ. ಸದ್ಯ ಭರವಸೆ ಮೂಡಿಸಿರುವ “ಫಾದರ್” ಈ ವರ್ಷದ ಹಿಟ್ ಲಿಸ್ಟ್ ಸಿನಿಮಾಗಳ ಸಾಲಿಗೆ ಸೇರುವ ಎಲ್ಲಾ ಲಕ್ಷಣಗಳೂ ಇವೆ.

ಈಗಾಗಲೇ ಸುದೀಪ್ ಅವರು ರಿಲೀಸ್ ಮಾಡಿದ್ದ ಈ ಸಿನಿಮಾದ ಫಸ್ಟ್ ಲುಕ್ ಗೆ ಸಾಕಷ್ಟು ಒಳ್ಳೆಯ ಪ್ರತಿಕ್ರಿಯೆಗಳು ಬಂದಿದ್ದವು. ಭಾವುಕ ಜೀವಿ ಅಪ್ಪನ ಕಥೆ ಹೇಳುವ ಮೂಲಕ ಅಪ್ಪ ಮತ್ತು ಮಗನ ಬಾಂಧವ್ಯ ಹೇಗಿರುತ್ತೆ ಅನ್ನೋದಕ್ಕೆ “ಫಾದರ್” ಬರುವಿಕೆಯಷ್ಟೇ ಬಾಕಿ.

ಮೈಸೂರು, ಧರ್ಮಸ್ಥಳ, ಮಂಗಳೂರು, ಬೆಂಗಳೂರು ಮುಂತಾದ ಕಡೆಗಳಲ್ಲಿ ಚಿತ್ರೀಕರಣಗೊಂಡಿರುವ ಈ ಸಿನಿಮಾಗೆ ವಾರಣಾಸಿಯಲ್ಲೂ ಚಿತ್ರೀಕರಣವಾಗಿದೆ.

ಎಲ್ಲರ ಮನಸ್ಸಿಗೆ ಹತ್ತಿರವಾಗುವ ಕಥೆ “ಫಾದರ್” ನೊಳಗಿದೆ. ಮುಂಬೈನ ಖ್ಯಾತ ಉದ್ಯಮಿ ಆನಂದ್ ಪಂಡಿತ್ ಅರ್ಪಿಸುವ, ಅಲಂಕಾರ್ ಪಾಂಡ್ಯನ್ ಅವರ ಸಹಯೋಗದಲ್ಲಿ ಆರ್.ಸಿ.ಸ್ಟುಡಿಯೋಸ್ ಈ ಸಿನಿಮಾ ನಿರ್ಮಿಸಿದರೆ, ರಾಜ್‍ ಮೋಹನ್‍ ನಿರ್ದೇಶನ ಮಾಡಿದ್ದಾರೆ. ಸುಜ್ಞಾನ್ ಛಾಯಾಗ್ರಹಣವಿದೆ. ಗೌರ ಹರಿ ಸಂಗೀತ ಚಿತ್ರಕ್ಕಿದೆ.

Leave a Reply

Your email address will not be published. Required fields are marked *