ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆಯ ಲಾಭದಿಂದ ಬಾಡಿಗೆದಾರರು ವಂಚಿತರಾಗುವ ಸಾಧ್ಯತೆಯಿದೆ. ಏಕೆಂದರೆ, 200 ಯೂನಿಟ್‌ವರೆಗೂ ಉಚಿತವಾಗಿ ವಿದ್ಯುತ್ ನೀಡುವ ಈ ಯೋಜನೆಯ ಮಾರ್ಗಸೂಚಿಯನ್ನು ಇಂಧನ ಇಲಾಖೆ ಸೋಮವಾರ ಬಿಡುಗಡೆ ಮಾಡಿದೆ.
- ಈ ಯೋಜನೆಯು ಗೃಹ ಬಳಕೆಯ ವಿದ್ಯುತ್ ಸಂಪರ್ಕಗಳಿಗೆ ಮಾತ್ರ ಅನ್ವಯವಾಗುತ್ತದೆ. ವಾಣಿಜ್ಯ ಉದ್ದೇಶಗಳಿಗೆ ವಿದ್ಯುತ್ ಉಪಯೋಗಿಸಿದಲ್ಲಿ ಅನ್ವಯವಾಗುವುದಿಲ್ಲ.
- ಪ್ರತಿ ತಿಂಗಳ ಮಿಟರ್ ರೀಡಿಂಗ್ ಮಾಡಿದಾಗ, ಒಟ್ಟು ವಿದ್ಯುತ್ ಬಳಕೆಯ ಪ್ರಮಾಣಕ್ಕೆ ಬಿಲ್ಲನ್ನು ನಮೂದಿಸುವುದು.
- ಗೃಹ ವಿದ್ಯುತ್ ಬಳಕೆದಾರನ ಅರ್ಹ ಮೊತ್ತವನ್ನು ಬಿಲ್‌ನಲ್ಲಿ ಕಡಿತಗೊಳಿಸಿ, ಉಳಿದ ಮೊತ್ತವನ್ನು ಗ್ರಾಹಕರಿಗೆ ನೆಟ್ ಬಿಲ್ ನೀಡುವುದು ಹಾಗೂ ಗ್ರಾಹಕರು ನೆಟ್ ಬಿಲ್ ಅನ್ನು ಪಾವತಿಸುವುದು.
- ಅರ್ಹ ಯೂನಿಟ್/ಮೊತ್ತಕ್ಕಿಂತ ಒಳಗೆ ಬಿಲ್ ಆಗಿದ್ದಲ್ಲಿ ಅಂತಹ ಗ್ರಾಹಕರಿಗೆ ಶೂನ್ಯ ಬಿಲ್ ನೀಡಲಾಗುವುದು.
- ಈ ಯೋಜನೆಯಡಿ ಸೌಲಭ್ಯ ಪಡೆಯಲು ಇಚ್ಛಿಸುವ ಗ್ರಾಹಕರು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬೇಕು
- ಪ್ರತಿ ಫಲಾನುಭವಿಯು ತನ್ನ ಕಸ್ಟಮರ್ ಐಡಿ ಅಥವಾ ಅಕೌಂಟ್ ಐಡಿ (Customer ID / Account ID) ಅನ್ನು ಆಧಾರ್‌ಗೆ ಕಡ್ಡಾಯವಾಗಿ ಜೋಡಣೆ ಮಾಡಿರಬೇಕು.
- ಪ್ರಸ್ತುತ ಚಾಲ್ತಿಯಲ್ಲಿರುವ ಭಾಗ್ಯ ಜ್ಯೋತಿ | ಕುಟೀರ ಜ್ಯೋತಿ ಯೋಜನೆ ಮತ್ತು ಅಮೃತ ಜ್ಯೋತಿ ಯೋಜನೆಯ ಫಲಾನುಭವಿ ಗ್ರಾಹಕರುಗಳನ್ನು ಗೃಹ ಜ್ಯೋತಿ ಯೋಜನೆಯಡಿಯಲ್ಲಿ ಸೇರ್ಪಡಿಸಲಾಗುವುದು.
- ಜೂನ್ ಅಂತ್ಯಕ್ಕೆ ಬಾಕಿ ಇರುವ ವಿದ್ಯುತ್ ಶುಲ್ಕದ ಬಾಕಿ ಮೊತ್ತವನ್ನು 3 ತಿಂಗಳೊಳಗೆ ಪಾವತಿಸಬೇಕು. ಬಾಕಿ ಮೊತ್ತವನ್ನು ನಿಗದಿತ ಅವಧಿಯೊಳಗೆ ಪಾವತಿಸದಿದ್ದಲ್ಲಿ ಅಂತಹ ಗ್ರಾಹಕರ ವಿದ್ಯುತ್ ಸ್ಥಾವರಗಳ ಸಂಪರ್ಕವನ್ನು ಕಡಿತಗೊಳಿಸಲಾಗುವುದು ಎಂದು ಹೇಳಿದೆ.
- ಗೃಹ ವಿದ್ಯುತ್ ಬಳಕೆದಾರರ ಹೆಸರಿನಲ್ಲಿ ಒಂದಕ್ಕಿಂತ ಹೆಚ್ಚು ಸ್ಥಾವರಗಳಿದ್ದಲ್ಲಿ, ಒಂದು ಸ್ಥಾವರಕ್ಕೆ ಮಾತ್ರ ಈ ಯೋಜನೆಯಡಿಯ ಸೌಲಭ್ಯಕ್ಕೆ ಅರ್ಹರಾಗುವರು ಎಂದು ತಿಳಿಸಿದೆ.