ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ವಿರುದ್ಧ ಹೆಚ್.ಡಿ.ಕೆ ಆಕ್ರೋಶ

ಬೆಂಗಳೂರು: ಜನರಿಗೆ ದುಂಬಾಲು ಬಿದ್ದು ಪೆನ್ ಕೊಡಿ, ಪೆನ್ ಕೊಡಿ ಎಂದು ಬೇಡಿದರು. ಜನರೂ ನಂಬಿ ಪೆನ್ ಕೊಟ್ಟರು. ಈಗ ಆ ಪೆನ್ ಅನ್ನು ತಮಿಳುನಾಡಿಗೆ ಒತ್ತೆ ಇಟ್ಟಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ‌ಎಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಶುಕ್ರವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರೆಡ್ ಕಾರ್ಪೆಟ್ ಹಾಕಿ ತಮಿಳು‌ನಾಡಿನ ಮುಖ್ಯಮಂತ್ರಿ ಸ್ಟಾಲಿನ್ ಅವರಿಗೆ ಸ್ವಾಗತ ಕೊರುತ್ತಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಕಿಡಿಕಾರಿದರು.

ರಾಜ್ಯ ಕಾಂಗ್ರೆಸ್ ಸರಕಾರ ಏಕಪಕ್ಷೀಯವಾಗಿ ತಮಿಳುನಾಡಿಗೆ ನೀರು ಹರಿಸಿದೆ. ಯಾರನ್ನು ಕೇಳಿ ಇವರು ನೀರು ಹರಿಸಿದ್ದಾರೆ ಜನರನ್ನು ಕೇಳಿದ್ದಾರೆಯೇ, ಪ್ರತಿಪಕ್ಷಗಳ ಜತೆ ಚರ್ಚೆ ಮಾಡಿದ್ದಾರೆಯೇ‌ ಅಥವಾ ನೀರು ಬಿಡುವಂತೆ ಸರಕಾರಕ್ಕೆ ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರ ಇಲ್ಲವೇ ಸುಪ್ರೀಂ ಕೋರ್ಟ್ ನಿರ್ದೇಶನ ಇದೆಯೇ ಹಾಗೇನಾದರೂ ಇದ್ದರೆ ಜನತೆಗೆ ತಿಳಿಸಬೇಕು ಎಂದು ಆಗ್ರಹಿಸಿದರು.

ಕುಮಾರಸ್ವಾಮಿ ಅವರು ಅವರ ಕಾಲದಲ್ಲಿ ನೀರು ಬಿಟ್ಟಿಲ್ವಾ ಎಂದು ಕೆಲವರು ಪ್ರಶ್ನೆ ಮಾಡುತ್ತಿದ್ದಾರೆ. ಅವರಿಗೆ ತಿಳುವಳಿಕೆ ಕೊರತೆ ಇದೆ.

ನಾನು ಎರಡು ಸಲ ಮುಖ್ಯಮಂತ್ರಿ ಆಗಿದ್ದಾಗ ತಮಿಳುನಾಡಿಗೆ ನೀರು ಹರಿಸಿದ್ದು ನಿಜ,ಆಗ ನಮ್ಮಲ್ಲಿ ಯಥೇಚ್ಛವಾಗಿ ನೀರು ಇತ್ತು. ಸಂಕಷ್ಟದ ಪರಿಸ್ಥಿತಿ ಇರಲಿಲ್ಲ‌ ಎಂದು ಹೇಳಿದರು.

ದೇವೇಗೌಡರ ಕಾಲದಲ್ಲಿಯೂ ಕೇಂದ್ರ ಸರಕಾರದ ಮನವಿ ಹಾಗೂ ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ನೀರು ಬಿಡಲಾಗಿತ್ತು.ಹಿಂದಿನ ಯಾವ ಸರಕಾರವೂ ಸರ್ವಾಧಿಕಾರಿ ಮನೋಭಾವದಿಂದ ಜನರ ಸಂಕಷ್ಟ ಲೆಕ್ಕಿಸದೆ ನೆರೆ ರಾಜ್ಯಕ್ಕೆ ನೀರು ಹರಿಸಿರಲಿಲ್ಲ ಎಂದು ತಿಳಿಸಿದರು.

ದೇವೇಗೌಡರ ಬಗ್ಗೆ ಮಾತನಾಡಬೇಕಾದರೆ ಇತಿಹಾಸ ತಿಳಿದು ಮಾತನಾಡಬೇಕು. 1962ರಿಂದ ಅವರು ಕಾವೇರಿ, ಕೃಷ್ಣಾ ಸೇರಿದಂತೆ ವಿವಿಧ ನದಿ ನೀರು ಹಕ್ಕಿಗಾಗಿ ನಡೆಸಿದ ಹೋರಾಟವನ್ನು ತಿಳಿದು ಮಾತನಾಡಬೇಕು. ಅವರೆಂದೂ ನಮ್ಮ ರಾಜ್ಯದ ರೈತರ ಹಿತಾಸಕ್ತಿ ಕಡೆಗಣಿಸಿ ನೆರೆ ರಾಜ್ಯಕ್ಕೆ ನೀರು ಬಿಟ್ಟಿಲ್ಲ. ಅವರ ಬಗ್ಗೆ ಮಾತಾಡೋಕೆ ಯಾರಿಗೂ ನೈತಿಕತೆ ಇಲ್ಲ ಎಂದು ಎಚ್ ಡಿ ಕೆ ಗರಂಆಗಿ ನುಡಿದರು.

ಈಗ ರಾಜ್ಯದಲ್ಲಿ ಮಳೆ ಇಲ್ಲ, ಬರ ಬಂದು ಕೂತಿದೆ. ಇದು ಸರಕಾರದ ಪಾಪದ ಫಲ. ಇವರ ಲೂಟಿ ಹೊಡೆಯುವ ಕುಕೃತ್ಯಕ್ಕೆ ಪ್ರಕೃತಿಯೂ ಸಹಕಾರ ನೀಡುತ್ತಿಲ್ಲ ಎಂದು ಟೀಕಿಸಿದರು.

ಕಾಂಗ್ರೆಸ್ ನವರು ಮೇಕೆದಾಟು ಪಾದಯಾತ್ರೆ ಮಾಡಿದರು, ಅದು ಎಲ್ಲಿಗೆ ಬಂತು? ಚಿಕನ್ ಲೆಗ್, ಮಟನ್ ಪೀಸ್ ತಿಂದು ಹೋರಾಟ ಮಾಡಿದ್ದಷ್ಟೇ ಆಯಿತು.

ಡಿಎಂಕೆ ನಿಮ್ಮ ಮಿತ್ರಪಕ್ಷ ಅಲ್ಲವೇ ತಮಿಳುನಾಡು ಮುಖ್ಯಾಮಂತಿ ಸ್ಟಾಲಿನ್ ಅವರು ನಿಮ್ಮ ಸ್ನೇಹಿತರೇ ಅಲ್ಲವೇ? ಕೊಟ್ಟು ತಗೆದುಕೊಳ್ಳುವ ಸಂಬಂಧ ಮಾಡ್ತಾ ಇದ್ದೀರಲ್ಲಾ, ಮೇಕೆದಾಟು ಮಾಡಿ ಎಂದು ಚಾಟಿ ಬೀಸಿದರು.

ಕಾವೇರಿ ನೀರು ಬಿಡುವಂತೆ ಸುಪ್ರೀಂ ಕೋರ್ಟ್ ನಲ್ಲಿ ತಮಿಳುನಾಡಿನವರು ಅರ್ಜಿ ಹಾಕಿದ್ದಾರೆ. ರಾಜ್ಯ ಸರಕಾರ ಏನು ಮಾಡುತ್ತಿದೆ ಎಂದು ಪ್ರಶ್ನಿಸಿದರು.

ಮಾಜಿ ಸಚಿವರಾದ ಬಂಡೆಪ್ಪ ಕಾಷೆಂಪೂರ್, ವೆಂಕಟರಾವ್ ನಾಡಗೌಡ, ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ, ಜೆಡಿಎಸ್ ನಗರ ಘಟಕದ ಅಧ್ಯಕ್ಷ ಹೆಚ್.ಎಂ.ರಮೇಶ್ ಗೌಡ ಈ ವೇಳೆ ಹಾಜರಿದ್ದರು.

Leave a Reply

Your email address will not be published. Required fields are marked *