ಬೆಳಗಾವಿ: ಇಡೀ ವರ್ಷ “ಜೈ ಬಾಪು, ಜೈ ಭೀಮ್, ಜೈ ಸಂವಿಧಾನ” ಅಭಿಯಾನವನ್ನು ಮಾಡುತ್ತಿದ್ದೇವೆ ಎಂದು ಬೆಳಗಾವಿಯಲ್ಲಿ ಮಾಧ್ಯಮಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಕ್ರಿಯೆ ನೀಡಿದರು.
ಗಾಂಧೀಜಿಯವರ ತತ್ವಾದರ್ಶಗಳನ್ನು ಪುನರ್ ಸ್ಥಾಪಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಗಾಂಧೀಜಿ ಹಾಗೂ ಅವರ ವಿಚಾರಧಾರೆಗಳು ಇಡೀ ವಿಶ್ವಕ್ಕೆ ಇಂದಿಗೂ ಪ್ರಸ್ತುತ. ಗಾಂಧೀಜಿಯವರು ಸೌಹಾರ್ದತೆ, ಸಮಾನತೆ ಬರಬೇಕೆಂದು ಸಾರಿದರು. ಅಸ್ಪೃಶ್ಯತೆ ಹೋಗಲಾಡಿಸಲು, ಮಹಿಳೆಯರಿಗೆ ಸ್ವಾತಂತ್ರ್ಯ ದೊರಕಿಸಿಕೊಡಲು, ಅವರ ಹಕ್ಕುಗಳ ರಕ್ಷಣೆಯಾಗಬೇಕೆಂದು ಪ್ರತಿಪಾದಿಸಿದ್ದರು.
ಗಾಂಧೀಜಿ, ಬಸವಣ್ಣ, ಕನಕದಾಸರ ವಿಚಾರಗಳು ಸಂವಿಧಾನದಲ್ಲಿ ಅಡಕವಾಗಿವೆ. ಗಾಂಧೀಜಿ, ಅಂಬೇಡ್ಕರ್ ಮತ್ತು ಸಂವಿಧಾನವನ್ನು ವಿರೋಧಿಸುವ ಅನಾಹುತಕಾರಿ ರಾಜಕಾರಣ ನಡೆಯುತ್ತಿದೆ. ಆದ್ದರಿಂದ ಇವುಗಳ ರಕ್ಷಣೆ ಮಾಡುವುದು ನಮ್ಮ ಜವಾಬ್ದಾರಿ. ನಾವು ಸಂವಿಧಾನದ ಪರವಾಗಿದ್ದೇವೆ. ಅವರು ಮನುವಾದದ ಪರವಾಗಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರಿಗೆ ಹುಷಾರಿಲ್ಲದ ಕಾರಣ ಅಧಿವೇಶನಕ್ಕೆ ಹಾಜರಾಗಲು ಸಾಧ್ಯವಾಗಿಲ್ಲ. ಅವರು ಸಮಾವೇಶದಿಂದ ದೂರ ಉಳಿಯುತ್ತಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಈ ರೀತಿ ತಿರುಚಿ ಸುದ್ದಿ ಹಾಕಿದರೆ ಪತ್ರಿಕಾ ವೃತ್ತಿಯ ಘನತೆ ಉಳಿಯುತ್ತದೆಯೇ? ಇದರಿಂದ ಏನು ಸಂದೇಶ ಹೋಗುತ್ತದೆ?