ಮೈಸುರು: ಸರಗೂರು ತಾಲೂಕಿನ ಬಿದರಹಳ್ಳಿ ಗ್ರಾಮದ ನೆರೆ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ಎಸ್.ಯು.ಸಿ.ಐ.(ಕಮ್ಯುನಿಸ್ಟ್) ಪಕ್ಷ ಮನವಿ ಮಾಡಿದೆ.
2019ರ ಆಗಸ್ಟ್ ತಿಂಗಳಲ್ಲಿ ಸುರಿದ ಮಹಾ ಮಳೆಯಿಂದಾಗಿ ಕಬಿನಿ ನದಿ ಪ್ರವಾಹದಿಂದಾಗಿ ಕಬಿನಿ ಜಲಾಶಯದ ಪಕ್ಕದಲ್ಲೇ ಇರುವ ಸರಗೂರು ತಾಲ್ಲೂಕಿನ ಬಿದರಹಳ್ಳಿ ಸರ್ಕಲ್ ಗ್ರಾಮದ ಮನೆಗಳು ಜಲಾವೃತವಾಗಿದ್ದವು. ಬಹುತೇಕ ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಹಾನಿಗೊಳಗಾಗಿದ್ದು, ವಾಸಿಸಲು ಯೋಗ್ಯವಾಗಿಲ್ಲ. ಸ್ವಲ್ಪ ದಿನಗಳ ಮಟ್ಟಿಗೆ ಕಾಳಜಿ ಕೇಂದ್ರದಲ್ಲಿ ವಾಸದ ವ್ಯವಸ್ಥೆ ಮಾಡಲಾಗಿದ್ದರೂ ನಂತರ ಅಲ್ಲಿಂದಲೂ ಯಾವುದೇ ಪರಿಹಾರ ನೀಡದೇ ಖಾಲಿ ಮಾಡಿಸಲಾಯಿತು.

ಅಂದಿನ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ವಸತಿ ಸಚಿವರಾದ ವಿ.ಸೋಮಣ್ಣರವರು ಭೇಟಿ ನೀಡಿ, ತಗ್ಗಿನಲ್ಲಿರುವ ನಮ್ಮ ಊರನ್ನು ಸ್ಥಳಾಂತರಿಸಿ, ಮೂರು ತಿಂಗಳ ಒಳಗಾಗಿ 42 ಹೊಸ ಮನೆಗಳ ನಿರ್ಮಾಣ ಮಾಡಿಕೊಡುವುದಾಗಿ ಹೇಳಿ, ಪರ್ಯಾಯ ಜಾಗವನ್ನೂ ಗುರುತಿಸಿ ಗುದ್ದಲಿ ಪೂಜೆ ಮಾಡಿದ್ದರು. ತಕ್ಷಣವೇ ಮನೆ ನಿರ್ಮಾಣ ಮಾಡಿಕೊಡುವ ಭರವಸೆ ನೀಡಿದ ಕಾರಣ ತಕ್ಷಣದ ಹಣಕಾಸಿನ ಪರಿಹಾರ ಸಹ ನೀಡಲಿಲ್ಲ. ಕಳೆದ ಎರಡು ವರ್ಷಗಳಿಂದ ನಮ್ಮ ಬದುಕು ಅತಂತ್ರವಾಗಿದೆ. ಇದುವರೆಗೆ ನಮಗೆ ಯಾವುದೇ ಪರಿಹಾರವಾಗಲಿ, ಪುನರ್ವಸತಿಯಾಗಲಿ ದೊರಕಿಲ್ಲ. ಕಾಡುಪ್ರಾಣಿಗಳ, ಹಾವುಗಳ ಭಯದಿಂದ ಸಂಬಂಧಿಕರ ಮನೆಗಳಲ್ಲಿ ದಿನದೂಡುವಂತಾಗಿದೆ. ಘನತೆಯಿಂದ ಬದುಕುವ ಹಕ್ಕನ್ನೇ ಕಳೆದುಕೊಂಡಿದ್ದೇವೆ. ಮಳೆಯಿಂದ ರಕ್ಷಿಸಿಕೊಳ್ಳಲು ಟರ್ಪಾಲು, ಷೀಟಿನಂತಹ ತಾತ್ಕಾಲಿಕ ವ್ಯವಸ್ಥೆಯನ್ನೂ ನಾವೇ ಮಾಡಿಕೊಂಡಿದ್ದೇವೆ.
ಕಳೆದ ಎರಡು ವರ್ಷದ ಅವಧಿಯಲ್ಲಿ ನಾವು ಸಲ್ಲಿಸಿದ ಮನವಿಗಳಿಗೆ ಲೆಕ್ಕವಿಲ್ಲ. ಸರಗೂರಿನ ತಹಸೀಲ್ದಾರರಿಗೆ, ಅಂದಿನ ಜಿಲ್ಲಾಧಿಕಾರಿಗಳಿಗೆ, ಸ್ಥಳೀಯ ಶಾಸಕರಿಗೆ, ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿದ್ದೇವೆ. ಕಳೆದ ವರ್ಷ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದೇವೆ. ಕಬಿನಿ ಜಲಾಶಯಕ್ಕೆ ಬಾಗಿನ ಅರ್ಪಿಸಲು ಬಂದಿದ್ದ ಮಾನ್ಯ ಶ್ರೀ ಯಡಿಯೂರಪ್ಪನವರಿಗೆ ಮನವಿ ಸಲ್ಲಿಸಿ ಸಮಸ್ಯೆ ಹೇಳಿಕೊಂಡಿದ್ದೇವೆ. ಅಂದಿನ ನೀರಾವರಿ ಸಚಿವರಿಗೂ ಅಹವಾಲು ಸಲ್ಲಿಸಿದ್ದೇವೆ. ಆದರೆ ಇದುವರೆಗೆ ಏನೂ ಆಗಿಲ್ಲ. ನಮ್ಮ ಪುನರ್ವಸತಿಗೆ ಗುರುತಿಸಿರುವ ಕಪಿಲೇಶ್ವರ ಕಾಲೊನಿಯ ಜಾಗ ಕಾವೇರಿ ನೀರಾವರಿ ನಿಗಮಕ್ಕೆ ಸೇರಿದ್ದು, ಅದು ಕಂದಾಯ ಇಲಾಖೆಗೆ ಹಸ್ತಾಂತರಗೊಳ್ಳದಿರುವುದೇ ಈ ವಿಳಂಬಕ್ಕೆ ಕಾರಣವೆಂದು ತಿಳಿದು ಬಂದಿದೆ. ಕಬಿನಿ ಅಣೆಕಟ್ಟು ಕಟ್ಟಲು ಆಗಮಿಸಿದ್ದ ನಮ್ಮ ಪೂರ್ವಜರು 50 ವರ್ಷಗಳ ಹಿಂದೆ ಇಲ್ಲೇ ನೆಲೆಸಿದರು. ನೀರಾವರಿ ಯೋಜನೆಗೆ ಬೆವರು ಸುರಿಸಿದ ನಮ್ಮ ಕುಟುಂಬಗಳನ್ನು ನೀರಾವರಿ ಇಲಾಖೆಯೇ ಅಕ್ಷರಶ ನಡುನೀರಿನಲ್ಲಿ ಕೈಬಿಟ್ಟಿದೆ. ಕೂಲಿಕಾರರಾದ ನಾವು ಕಳೆದೆರಡು ವರ್ಷಗಳಿಂದ ಕೋವಿಡ್ ಕಾರಣದಿಂದ ಸರಿಯಾದ ಉದ್ಯೋಗವೂ ಲಭಿಸದೆ ಕಂಗಾಲಾಗಿದ್ದೇವೆ.
ರಾಜ್ಯ ಸರ್ಕಾರದ ಎರಡು ವರ್ಷಗಳ ಸಾಧನೆಗಳ ಬಗ್ಗೆ ಇದೇ ಜುಲೈ 26ರಂದು ಪ್ರಕಟವಾಗಿದ್ದ ಜಾಹೀರಾತಿನಲ್ಲಿ ನೆರೆ ಸಂತ್ರಸ್ತರ ಪರಿಹಾರ, ಪುನರ್ವಸತಿ ಪೂರ್ಣಗೊಂಡಿರುವ ಊರುಗಳ ಪಟ್ಟಿಯಲ್ಲಿ ಬಿದರಹಳ್ಳಿಯ ಹೆಸರೂ ಇರುವುದನ್ನು ಕಂಡು ನಮಗೆ ದಿಗ್ಭ್ರಮೆಯಾಗಿದೆ. ಕೋವಿಡ್ ನಿಯಂತ್ರಣದ ತುರ್ತು ಕೆಲಸಗಳಲ್ಲಿ ಜಿಲ್ಲಾಡಳಿತ ಮುಳುಗಿ ಹೋಗಿದ್ದರಿಂದ ನಾವು ಇಷ್ಟು ಕಾಲ ಸಹನೆಯಿಂದ ಕಾದಿದ್ದೇವೆ. ಇನ್ನಾದರೂ ವಿಳಂಬ ಮಾಡದೆ ತಕ್ಷಣವೇ ನಮಗೆ ಪುನರ್ವಸತಿ ಒದಗಿಸಬೇಕೆಂದು ನಾವು ಒತ್ತಾಯಿಸುತ್ತೇವೆ. ಇನ್ನು ಒಂದು ತಿಂಗಳ ಒಳಗೆ ಮನೆಗಳನ್ನು ಕಟ್ಟುವ ಪ್ರಕ್ರಿಯೆಗೆ ಚಾಲನೆ ನೀಡದೇ ಹೋದಲ್ಲಿ ನೆರೆ ಸಂತ್ರಸ್ತರಾದ ನಾವು ಎಸ್.ಯು.ಸಿ.ಐ. ಕಮ್ಯುನಿಸ್ಟ್ ಪಕ್ಷದ ಸಹಕಾರದೊಂದಿಗೆ ನಮ್ಮ ಕುಟುಂಬಗಳ ಸಮೇತ, ಮೈಸೂರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಅನಿರ್ದಿಷ್ಟಾವಧಿ ಧರಣಿ ನಡೆಸುವುದು ಅನಿವಾರ್ಯವಾಗುತ್ತದೆ. ಮೈಸೂರಿನ ನಾಗರಿಕರು ಮಾನವೀಯತೆಯ ದೃಷ್ಟಿಯಿಂದ ನಮ್ಮ ಈ ಹೋರಾಟವನ್ನು ಬೆಂಬಲಿಸಬೇಕೆಂದು ಕೋರುತ್ತೇವೆ.
ಆಗ್ರಹಗಳು
1. ಬಿದರಹಳ್ಳಿ ಪಕ್ಕದ ಕಪಿಲೇಶ್ವರ ಕಾಲೊನಿಯಲ್ಲಿ ಪುನರ್ವಸತಿಯ 42 ಮನೆಗಳ ಕಾಮಗಾರಿಯನ್ನು ತಕ್ಷಣವೇ ಆರಂಭಿಸಿ.
2. ಆರು ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸಿ, ಸಂತ್ರಸ್ತರಿಗೆ ಹಕ್ಕುಪತ್ರ ವಿತರಿಸಿ.
(ಬಿ.ರವಿ) ಜಿಲ್ಲಾ ಕಾರ್ಯದರ್ಶಿ, ಎಸ್.ಯು.ಸಿ.ಐ.(ಕಮ್ಯುನಿಸ್ಟ್) ಪಕ್ಷ, ಸುನಿಲ್ ಟಿ ಆರ್ ಜಿಲ್ಲಾ ಸಮಿತಿ ಸದಸ್ಯರು
ನೆರೆ ಸಂತ್ರಸ್ತರು: ಚೆಲುವಿ, ಪದ್ಮ, ಸತ್ಯಮೂರ್ತಿ