ಸಿನಿಮಾ: ‘ರಿಯಲ್ ಸ್ಟಾರ್’ ಉಪೇಂದ್ರ ಅಭಿನಯದ ‘ಕಬ್ಜ’ ಚಿತ್ರದಲ್ಲಿ ಕಿಚ್ಚ ಸುದೀಪ್ ಅವರು ನಟಿಸುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ಇದೀಗ ಚಿತ್ರದಲ್ಲಿ ಕಿಚ್ಚನ ಲುಕ್ ಹೇಗಿರಲಿದೆ ಎಂಬ ಬಗ್ಗೆಯೂ ಮಾಹಿತಿ ಸಿಕ್ಕಿದೆ. ಹೌದು, ಕಬ್ಜ ಚಿತ್ರದಲ್ಲಿ ‘ಭಾರ್ಗವ್ ಭಕ್ಷಿ’ ಪಾತ್ರದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ವಿಜೃಂಭಿಸಲಿದ್ದಾರೆ.
‘ಭಾರ್ಗವ್ ಭಕ್ಷಿ’ ಪಾತ್ರದ ಲುಕ್ ಹೇಗಿರಲಿದೆ ಎಂಬುದಕ್ಕೆ ಕಿಚ್ಚ ಸುದೀಪ್ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಡಿ.15ರಂದು ಶೂಟಿಂಗ್ ಕೂಡ ಶುರುವಾಗಿದ್ದು, ಸುದೀಪ್ ಚಿತ್ರತಂಡ ಸೇರಿಕೊಂಡಿದ್ದಾರೆ.
ನಟ ಉಪೇಂದ್ರ ಮತ್ತು ‘ಕಿಚ್ಚ’ ಸುದೀಪ್ ಒಟ್ಟಿಗೆ ಈ ಹಿಂದೆ ‘ಮುಕುಂದ ಮುರಾರಿ’ ಸಿನಿಮಾ ಮಾಡಿದ್ದರು. ‘ಓಹ್ ಮೈ ಗಾಡ್’ ಸಿನಿಮಾದ ರಿಮೇಕ್ ಆಗಿದ್ದ ಆ ಚಿತ್ರವು ನೋಡುಗರಿಂದ ಮೆಚ್ಚುಗೆ ಪಡೆದುಕೊಂಡಿತ್ತು. ಇದೀಗ ಪುನಃ ಉಪ್ಪಿ-ಸುದೀಪ್ ಒಂದಾಗಿದ್ದಾರೆ. ಈ ಬಾರಿ ಅವರು ‘ಕಬ್ಜ’ ಚಿತ್ರದಲ್ಲಿ ಒಟ್ಟಿಗೆ ನಟಿಸುತ್ತಿದ್ದಾರೆ.