ಜೈಲಿಗೆ ಹೋಗುವೆ ಆದರೆ ಕಾಂಗ್ರೆಸ್‍ಗೆ‌ ಮಾತ್ರ ಹೋಗೊಲ್ಲ: ಮುನಿರತ್ನ

ಬೆಂಗಳೂರು: ನಾನು ಜೈಲಿಗೆ ಬೇಕಾದರೂ ಹೋಗುತ್ತೇನೆ,ಆದರೆ ಯಾವುದೇ ಕಾರಣಕ್ಕೂ ಮತ್ತೆ ಕಾಂಗ್ರೆಸ್‍ ಪಕ್ಷಕ್ಕೆ ಹೋಗುವುದಿಲ್ಲ ಎಂದು ಶಾಸಕ ಮುನಿರತ್ನ ಹೇಳಿದರು.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಐದು ವರ್ಷ ಜೈಲಿನಲ್ಲೇ ಇರುತ್ತೇನೆ. ನನ್ನ ಕ್ಷೇತ್ರದ ಅಭಿವೃದ್ಧಿ ಮಾಡಿಕೊಟ್ಟರೆ ಸಾಕು, ರಾಜೀನಾಮೆ ಕೊಡು ಕ್ಷೇತ್ರದ ಅಭಿವೃದ್ಧಿ ಮಾಡಿಕೊಡುತ್ತೇವೆ ಎಂದರೆ ಅದಕ್ಕೂ ಸಿದ್ದ,ಆದರೆ ಕಾಂಗ್ರೆಸ್‍ಗೆ ಮಾತ್ರ ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

17 ಜನರಲ್ಲಿ ಯಾರು ಕಾಂಗ್ರೆಸ್ ಗೆ ಹೋಗುತ್ತಾರೆ ಅಂತ ನನಗೆ ಗೊತ್ತಿಲ್ಲ. ನಾನಂತೂ ಬಿಜೆಪಿ ಬಿಟ್ಟು ಹೋಗಲ್ಲ,ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆಯೇ ಹೊರತು ಕಾಂಗ್ರೆಸ್‍ಗೆ ಹೋಗಲ್ಲ ಎಂದರು

ಮುನಿರತ್ನ ಭೇಟಿ ಮಾಡಿದ್ದರು ಎಂಬ ಡಿಕೆಶಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ,ಅವರ ಮನೆಗೆ ಯಾರು ಹೋಗಿದ್ದರು, ಕಳ್ಳತನದಿಂದ ಯಾರಾದ್ರೂ ಹೋಗಿದ್ರಾ, ಬುರ್ಕಾ ಹಾಕಿಕೊಂಡು ಹೋಗಿದ್ರಾ ಅದನ್ನ ಹೇಳಲಿ. ಕ್ಷೇತ್ರದ ವಿಚಾರ ಬಗ್ಗೆ ಮಾತಾಡಿದ್ದನ್ನು ರಾಜಕೀಯವಾಗಿ ಡಿಕೆಶಿ ಬಳಸಿಕೊಳ್ಳುವುದು ಸರಿಯಲ್ಲ ಎಂದು ತಿಳಿಸಿದರು.

ವೈಯಕ್ತಿಕವಾಗಿ ಡಿ.ಕೆ. ಸುರೇಶ್, ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಜೊತೆ ಯಾವುದೇ ದ್ವೇಷ ಇಲ್ಲ. ಅಧಿಕಾರಕ್ಕೋಸ್ಕರ ನಾನು ಪಕ್ಷ ಬಿಟ್ಟು ಹೋಗಲ್ಲ.

ಬಿಜೆಪಿಯಲ್ಲಿ ನನ್ನನ್ನು ಗೌರವದಿಂದ ನೋಡಿಕೊಂಡಿದ್ದಾರೆ, ನಳೀನ್ ಕುಮಾರ್ ಕಟೀಲ್ ಗೌರವದಿಂದ ಮಾತಾಡಿಸುತ್ತಾರೆ. ಎಂದೂ ಏಕವಚನದಿಂದ ಮಾತಾಡಿಸಿಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಡಿ.ಕೆ. ಶಿವಕುಮಾರ್ ರಾಜಕೀಯ ಗುರು ಎಂಬ ಎಸ್.ಟಿ. ಸೋಮಶೇಖರ್ ಹೇಳಿಕೆ ಕುರಿತು ಪ್ರತಿಕ್ರಯಿಸಿ ಅದು ಅವರ ವೈಯಕ್ತಿಕ ಅಭಿಪ್ರಾಯ, ನನಗೆ ಶಿವಕುಮಾರ್ 40 ವರ್ಷಗಳ ಸ್ನೇಹಿತರು. ನನ್ನ ಜೀವನದ ಗುರು, ರಾಜಕೀಯ ಗುರು ಬಿ.ಕೆ. ಹರಿಪ್ರಸಾದ್,ಇದು ರಾಜಕೀಯ ಕಾರಣ ಅಲ್ಲ,ನಮ್ಮ ಊರಿನ ಸಂಬಂಧ ಎಂದು ಹೇಳಿದರು.

6 ತಿಂಗಳಲ್ಲಿ ಸರ್ಕಾರ ಮುಗಿಯುತ್ತದೆ ಎಂಬ ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯಿಸಿ, ಅದು ಎಷ್ಟು ದಿನವೋ ಗೊತ್ತಿಲ್ಲ, ನಾನು ಜ್ಯೋತಿಷಿ ಅಲ್ಲ ಎಂದು ಮುನಿರತ್ನ ತಿಳಿಸಿದರು.

Leave a Reply

Your email address will not be published. Required fields are marked *