ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಅಗಲಿದ ವಿಚಾರ ಇಂದಿಗೂ ಅಭಿಮಾನಿಗಳಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಅಪ್ಪು ನಿಧನದ ಬಳಿಕ ಪುನೀತ್ ಜೀವನ ಚರಿತ್ರೆಯನ್ನು ಪಠ್ಯ ಪುಸ್ತಕದಲ್ಲಿ ಅಳವಡಿಸಬೇಕು ಎಂದು ಸರ್ಕಾರವನ್ನು ಅಭಿಮಾನಿಗಳು ಒತ್ತಾಯಿಸಿದ್ದರು. ಇದೀಗ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ಅಂದರೆ, ಬೆಂಗಳೂರು ವಿಶ್ವವಿದ್ಯಾಲಯವು ತನ್ನ ಬಿಕಾಂ ಪದವಿ ಮೂರನೇ ಸೆಮಿಸ್ಟರ್ ಕನ್ನಡ ಭಾಷಾ ಪಠ್ಯ ‘ವಾಣಿಜ್ಯ ಕನ್ನಡ 3’ ನಲ್ಲಿ ಪುನೀತ್ ಅವರ ಜೀವನದ ಆಯ್ದ ಭಾಗವನ್ನು ಪಠ್ಯಕ್ಕೆ ಅಳವಡಿಸಿಕೊಂಡಿದೆ.

ಹೌದು. ಪತ್ರಕರ್ತ ಡಾ.ಶರಣು ಹುಲ್ಲೂರು ಬರೆದ, ಸಾವಣ್ಣ ಪ್ರಕಾಶನ ಹೊರ ತಂದಿರುವ ‘ನೀನೇ ರಾಜಕುಮಾರ್’ ಕೃತಿಯ ಒಂದು ಅಧ್ಯಾಯವಾದ ‘ಲೋಹಿತ್ ಎಂಬ ಮರಿಮುದ್ದ’ ಭಾಗವನ್ನು ಪಠ್ಯದಲ್ಲಿ ಬಳಸಿಕೊಂಡಿದೆ ಬೆಂಗಳೂರು ವಿಶ್ವವಿದ್ಯಾಲಯ. ಡಾ.ಮುನಿಯಪ್ಪ ಈ ಪಠ್ಯಪುಸ್ತಕದ ಪ್ರಧಾನ ಸಂಪಾದಕರಾಗಿದ್ದು, ಡಾ.ಅಮರೇಂದ್ರ ಶೆಟ್ಟಿ ಆರ್, ಡಾ.ಕ.ನಿಂ. ಹೊಯ್ಸಳಾದಿತ್ಯ, ಡಾ.ಶಿವರಾಜ ಬಿ.ಇ ಹಾಗೂ ಡಾ.ರಘುನಂದನ್ ಬಿ.ಆರ್ ಅವರು ಪಠ್ಯದ ಸಂಪಾದಕರಾಗಿದ್ದಾರೆ. ಈ ವರ್ಷದ ಬಿ.ಕಾಂ ಪದವಿ ಮೂರನೇ ಸೆಮಿಸ್ಟರ್ ಕನ್ನಡ ಭಾಷಾ ಪಠ್ಯದಲ್ಲಿ ಪುನೀತ್ ಅವರ ಬಾಲ್ಯವನ್ನು ಅಳವಡಿಸಲಾಗಿದೆ.