ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಸಹಭಾಗಿತ್ವದಲ್ಲಿ ಐಟಿಬಿಟಿ ಇಲಾಖೆಯು ಜಾಗತಿಕ ಸಾಮರ್ಥ್ಯ ಕೇಂದ್ರ ಮುಖಂಡರ ಜೊತೆ ‘ಕ್ಯಾಟಲಿಸ್ಟ್ ಕನೆಕ್ಟ್’ ಸಭೆ ನಡೆಯಿತು.
ದೇಶದ ಪ್ರಮುಖ ‘ಜಿಸಿಸಿ’ ತಾಣವಾಗಿ ಕರ್ನಾಟಕ ಬೆಳೆದಿರುವುದು ಜಾಗತಿಕ ಉದ್ಯಮ ಸಮುದಾಯದ ವಿಶ್ವಾಸದ ಫಲವಾಗಿದೆ. ಇಂದು ‘ಜಿಸಿಸಿ’ಗಳು ಕೇವಲ ಸೇವಾ ವಿತರಣಾ ಕೇಂದ್ರಗಳಷ್ಟೇ ಅಲ್ಲದೆ, ಕೃತಕ ಬುದ್ಧಿಮತ್ತೆ (AI), ಸಂಶೋಧನೆ ಮತ್ತು ಅಭಿವೃದ್ಧಿ (R&D) ಹಾಗೂ ಉತ್ಪನ್ನ ನಾವೀನ್ಯತೆಯ ಜಾಗತಿಕ ಕೇಂದ್ರಗಳಾಗಿ ಬೆಳೆಯುತ್ತಿವೆ.
ಜಿಸಿಸಿಗಳು ಇನ್ನಷ್ಟು ದೊಡ್ಡ ಜಾಗತಿಕ ಜವಾಬ್ದಾರಿಗಳನ್ನು ನಿರ್ವಹಿಸಲು ಅಗತ್ಯವಾದ ತಂತ್ರಜ್ಞರ ಲಭ್ಯತೆ, ನೀತಿ ನಿಯಮಗಳ ನೆರವು ಮತ್ತು ಅತ್ಯುತ್ತಮ ಇಕೋ ಸಿಸ್ಟಂ ಒದಗಿಸಲು ಕರ್ನಾಟಕ ಸರ್ಕಾರ ಬದ್ಧವಾಗಿದೆ. ಕೈಗಾರಿಕಾ ವಲಯದ ಜೊತೆಗಿನ ಸಹಭಾಗಿತ್ವವನ್ನು ಮತ್ತಷ್ಟು ಗಟ್ಟಿಗೊಳಿಸುವ ಮೂಲಕ ಸರ್ಕಾರ ನಿರಂತರ ಉತ್ತೇಜನ ನೀಡಲಿದೆ.
ಇದರೊಂದಿಗೆ ಗೂಗಲ್, ಇಂಟೆಲ್, ಐಬಿಎಂ, ನೋಕಿಯಾ, ಬಾಷ್ ಸೇರಿದಂತೆ ವಿಶ್ವದ 150ಕ್ಕೂ ಹೆಚ್ಚು ಬಹುರಾಷ್ಟ್ರೀಯ ಉದ್ಯಮಗಳ ಹಿರಿಯ ಕಾರ್ಯನಿರ್ವಾಹಕರು ಭಾಗವಹಿಸಿದ್ದ ಈ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಸಲಾಯಿತು:
➧ ಕೃತಕ ಬುದ್ಧಿಮತ್ತೆ (AI), ಜೆನ್‌ಎಐ (GenAI) ಮತ್ತು ಉದ್ಯಮ ಪರಿವರ್ತನೆ.
➧ ಪ್ರತಿಭಾನ್ವಿತ ತಂತ್ರಜ್ಞರ ಅಭಿವೃದ್ಧಿ ಹಾಗೂ ಭವಿಷ್ಯದ ಕಾರ್ಯಪಡೆಯ ಸಿದ್ಧತೆ.
➧ ಡಿಜಿಟಲ್ ಮೂಲಸೌಕರ್ಯ ಮತ್ತು ಸುಲಲಿತ ಉದ್ಯಮ ನೀತಿಯ (EoDB) ಪರಿಣಾಮಕಾರಿ ಜಾರಿ.
➧ ’ಬಿಯಾಂಡ್ ಬೆಂಗಳೂರು’ ಉಪಕ್ರಮದಡಿ ಬೆಂಗಳೂರಿನ ಆಚೆಗೂ ಜಿಸಿಸಿ ಹೂಡಿಕೆಗಳ ವಿಸ್ತರಣೆ.
ಮುಂದಿನ ತಲೆಮಾರಿನ ಜಾಗತಿಕ ತಂತ್ರಜ್ಞಾನಗಳು ಕರ್ನಾಟಕದಿಂದಲೇ ವಿಸ್ತರಣೆಯಾಗಲು ಈ ಸಹಭಾಗಿತ್ವವನ್ನು ಮತ್ತಷ್ಟು ಬಲಪಡಿಸಲಾಗುವುದು. 2029ರ ಒಳಗೆ 500 ಹೊಸ ಜಿಸಿಸಿಗಳನ್ನು ಆಕರ್ಷಿಸುವ, 3.5 ಲಕ್ಷ ಗುಣಮಟ್ಟದ ಉದ್ಯೋಗ ಸೃಷ್ಟಿಸುವ ಹಾಗೂ ₹4.76 ಲಕ್ಷ ಕೋಟಿ ಮೊತ್ತದ ಆರ್ಥಿಕ ಉತ್ಪಾದನೆಯ ಗುರಿ ಸಾಧಿಸಲು ಸರ್ಕಾರ ಬದ್ಧವಾಗಿದೆ.