ಮೈಸೂರು: ಕನ್ನಡ ಸೇರಿದಂತೆ ಬಹುಭಾಷೆಗಳಲ್ಲಿ ತನ್ನ ಕಂಠಸಿರಿಯ ಮೂಲಕ ಚಿತ್ರಪ್ರೇಮಿಗಳ ಮನಗೆದ್ದವರು ಎಸ್. ಜಾನಕಿ (88) ಅವರು ಮೈಸೂರಿನಲ್ಲಿ ನಿಧನರಾಗಿದ್ದಾರೆ.
ಅನಾರೋಗ್ಯದಿಂದ ಮೈಸೂರಿನ ಅಪೊಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು. ಹೃದಯಾಘಾತದಿಂದ ಅವರು ಮೃತಪಟ್ಟಿರುವುದಾಗಿ ಮೂಲಗಳು ತಿಳಿಸಿವೆ. 1938ರ ಏಪ್ರಿಲ್ 23ರಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ರೆಪಲ್ಲೆ ಗ್ರಾಮದಲ್ಲಿ ಜನಿಸಿದ ಎಸ್. ಜಾನಕಿ, ಬಾಲ್ಯದಲ್ಲೇ ಸಂಗೀತಾಭ್ಯಾಸ ಆರಂಭಿಸಿದರು. 1957ರಲ್ಲಿ ತಮಿಳಿನ ‘ವಿಧಿಯಿನ್ ವಿಳಯಾಟ್ಟು’ ಚಿತ್ರದ ಮೂಲಕ ಚಿತ್ರರಂಗಕ್ಕೆ ಹಿನ್ನೆಲೆ ಗಾಯಕಿಯಾಗಿ ಪ್ರವೇಶಿಸಿದರು.
ಎಸ್. ಜಾನಕಿ ಅವರು ತಮ್ಮ ಸಂಗೀತ ಜೀವನದಲ್ಲಿ ಕನ್ನಡ ಚಿತ್ರರಂಗದೊಂದಿಗೆ ಅತ್ಯಂತ ಆಪ್ತ ಸಂಬಂಧ ಬೆಳೆಸಿಕೊಂಡಿದ್ದರು. ಸುಮಾರು ಆರು ದಶಕಗಳ ಕಾಲ ಇಪ್ಪತ್ತಕ್ಕೂ ಹೆಚ್ಚು ಭಾಷೆಗಳಲ್ಲಿ 48 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿ, ತಮ್ಮ ಸುಮಧುರ ಕಂಠಸಿರಿಯ ಮೂಲಕ ಕೋಟ್ಯಂತರ ಸಂಗೀತಾಭಿಮಾನಿಗಳ ಹೃದಯವನ್ನು ಗೆದ್ದ ಅವರು, ಕನ್ನಡ ಸೇರಿದಂತೆ ಭಾರತೀಯ ಚಿತ್ರರಂಗಕ್ಕೆ ಅನನ್ಯವಾದ ಕೊಡುಗೆ ನೀಡಿದ್ದಾರೆ.
ಅವರು ಸಂಗೀತ ಕ್ಷೇತ್ರಕ್ಕೆ ನೀಡಿದ ಅಪ್ರತಿಮ ಕೊಡುಗೆಗಾಗಿ ಅತ್ಯುತ್ತಮ ಹಿನ್ನೆಲೆ ಗಾಯಕಿ ಸೇರಿದಂತೆ ನಾಲ್ಕು ರಾಷ್ಟ್ರ ಪ್ರಶಸ್ತಿಗಳು ಹಾಗೂ ಹಲವಾರು ರಾಜ್ಯ ಪ್ರಶಸ್ತಿ ಮತ್ತು ಗೌರವಗಳಿಗೆ ಭಾಜನರಾಗಿದ್ದರು. ಮೈಸೂರು ವಿಶ್ವವಿದ್ಯಾಲಯವು ಅವರಿಗೆ ಗೌರವ ಡಾಕ್ಟರೇಟ್ ನೀಡಿ ಸನ್ಮಾನಿಸಿತ್ತು. ಭಾರತ ಸರ್ಕಾರ ಘೋಷಿಸಿದ್ದ ಪದ್ಮಭೂಷಣ ಪ್ರಶಸ್ತಿಯನ್ನು, ದಕ್ಷಿಣ ಭಾರತದ ಕಲಾವಿದರಿಗೆ ಸೂಕ್ತ ಗೌರವ ದೊರೆಯುತ್ತಿಲ್ಲ ಎಂಬ ಕಾರಣ ನೀಡಿ ಅವರು ಸ್ವೀಕರಿಸಲು ನಿರಾಕರಿಸಿದ್ದರು.
ಎಸ್. ಜಾನಕಿ ಅವರ ನಿಧನದಿಂದ ಭಾರತೀಯ ಸಂಗೀತ ಲೋಕವು ತನ್ನ ಶ್ರೇಷ್ಠ ಗಾಯಕಿಯೊಬ್ಬರನ್ನು ಕಳೆದುಕೊಂಡಿದ್ದು, ಚಿತ್ರರಂಗ ಮತ್ತು ಸಂಗೀತ ಕ್ಷೇತ್ರದ ಗಣ್ಯರು ಸೇರಿದಂತೆ ಸಾವಿರಾರು ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.