ಬೆಳಗಾವಿ: ಸದಾ ಜನನಿಬಿಡ ರಾಜಕೀಯ ಚಟುವಟಿಕೆಗಳಲ್ಲಿ ಬ್ಯುಸಿಯಾಗಿರುವ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಇಂದು ಬೆಳ್ಳಂಬೆಳಗ್ಗೆ ಯೋಗಿಕೊಳದ ಪ್ರಕೃತಿಯ ಮಡಿಲಿನಲ್ಲಿ ಅತ್ಯಂತ ಸರಳವಾಗಿ ಕಾಲ ಕಳೆದರು.
ನಿಸರ್ಗ ರಮಣೀಯ ಪರಿಸರದಲ್ಲಿ ಸಚಿವರು ಹಾಗೂ ಅವರ ಪುತ್ರ ಗಂಗಾ ಈಜುಗಾರರ ಸಂಘದ ಸದಸ್ಯರೊಂದಿಗೆ ಜೊತೆಯಾಗಿ ಕುಳಿತು ಬೆಳಗಿನ ಉಪಹಾರ ಸೇವಿಸಿದರು. ಯಾವುದೇ ಹಮ್ಮು-ಬಿಮ್ಮು ಇಲ್ಲದೆ, ಸಾಮಾನ್ಯರಂತೆ ಎಲ್ಲರೊಂದಿಗೆ ಬೆರೆತ ಸಚಿವರ ನಡೆ ಅಲ್ಲಿದ್ದವರ ಗಮನ ಸೆಳೆಯಿತು.
ಮಕ್ಕಳೊಂದಿಗೆ ಸಂವಾದ: ಉಪಹಾರದ ನಂತರ ಸಚಿವ ಸತೀಶ್ ಜಾರಕಿಹೊಳಿ ಮತ್ತು ರಾಹುಲ್ ಜಾರಕಿಹೊಳಿ ಅವರು ಅಲ್ಲಿ ನೆರೆದಿದ್ದ ಸಾರ್ವಜನಿಕರ ಕುಶಲೋಪರಿ ವಿಚಾರಿಸಿದರು. ವಿಶೇಷವಾಗಿ ಅಲ್ಲಿದ್ದ ಪುಟ್ಟ ಮಕ್ಕಳೊಂದಿಗೆ ಸಮಯ ಕಳೆದು ಸಂತಸ ಪಟ್ಟರು. ಸಚಿವರ ಈ ಆಪ್ತ ಮತ್ತು ಸರಳ ನಡವಳಿಕೆಯು ಅಲ್ಲಿ ಹಬ್ಬದ ವಾತಾವರಣವನ್ನು ಸೃಷ್ಟಿಸಿತ್ತು.
ಯಾವುದೇ ಔಪಚಾರಿಕತೆ ಇಲ್ಲದೆ, ಪ್ರಕೃತಿಯ ಶಾಂತ ವಾತಾವರಣದಲ್ಲಿ ಸಾರ್ವಜನಿಕರು ಹಾಗೂ ಮಕ್ಕಳೊಂದಿಗೆ ಸಮಯ ಕಳೆದಿದ್ದು, ರಾಜಕೀಯದ ಒತ್ತಡದ ನಡುವೆಯೂ ಸಚಿವರು ತಮ್ಮ ಬಿಡುವಿನ ವೇಳೆಯನ್ನು ಸಾರ್ವಜನಿಕರು ಹಾಗೂ ಕ್ರೀಡಾಸಕ್ತರೊಂದಿಗೆ ಕಳೆದಿರುವುದು ಸ್ಥಳೀಯರ ಪ್ರಶಂಸೆಗೆ ಪಾತ್ರವಾಗಿದೆ. ಈ ಸಂದರ್ಭದಲ್ಲಿ ಗಂಗಾ ಈಜುಗಾರರ ಸಂಘದ ಪದಾಧಿಕಾರಿಗಳು ಹಾಗೂ ಪ್ರಮುಖರು ಉಪಸ್ಥಿತರಿದ್ದರು