ಸಾಹಿತಿ ಡಿಎಸ್​ ನಾಗಭೂಷಣ ವಿಧಿವಶ

ಶಿವಮೊಗ್ಗ: ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ, ಮಲೆನಾಡಿನ ಪ್ರಸಿದ್ಧ ಸಾಹಿತಿ ಡಿಎಸ್​ ನಾಗಭೂಷಣ ಅವರು ನಿಧನರಾಗಿದ್ದಾರೆ. ನಾಗಭೂಷಣ ಅವರಿಗೆ 74 ವರ್ಷ ವಯಸ್ಸಾಗಿತ್ತು. ಕಳೆದ ಮೂರು ತಿಂಗಳಿನಿಂದ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರು, ನಿನ್ನೆ ತಡರಾತ್ರಿ ತಮ್ಮ ಮನೆಯಲ್ಲಿ ಸಾವನ್ನಪ್ಪಿದ್ದಾರೆ.

ಡಿಎಸ್​ ನಾಗಭೂಷಣ ಅವರು ಫೆಬ್ರವರಿ 1 1952ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ತಿಮ್ಮಸಂದ್ರದಲ್ಲಿ ಜನಿಸಿದರು. ಆಕಾಶವಾಣಿಯ ವಿವಿಧ ಹುದ್ದೆಗಳಲ್ಲಿ 30 ವರ್ಷ ಕಾರ್ಯ ನಿರ್ವಹಿಸಿದ್ದರು. 2005 ರಲ್ಲಿ ವೃತ್ತಿಯಿಂದ ಸ್ವಯಂ ನಿವೃತ್ತಿ ಪಡೆದರು.

ಓದು, ಬರವಣಿಗೆಯನ್ನು ಹವ್ಯಾಸವಾಗಿಸಿಕೊಂಡಿದ್ದ ಅವರು ‘ಇಂದಿಗೆ ಬೇಕಾದ ಗಾಂಧಿ’, ‘ಲೋಹಿಯಾ ಜೊತೆಯಲ್ಲಿ’, ‘ರೂಪ ರೂಪಗಳನು ಧಾಟಿ’, ‘ಕುವೆಂಪು ಒಂದು ಪುನರನ್ವೇಷಣೆ’, ‘ಕುವೆಂಪು ಸಾಹಿತ್ಯ ದರ್ಶನ’, ‘ಜಯ ಪ್ರಕಾಶ ನಾರಾಯಣ ಒಂದು ಅಪೂರ್ಣ ಕ್ರಾಂತಿಯ ಕಥೆ’, ‘ನಮ್ಮ ಶಾಮಣ್ಣ’, ‘ಕನ್ನಡದ ಮನಸು ಮತ್ತು ಇತರ ಲೇಖನಗಳು’. ಹಾಗೂ ‘ಕಾಲಕ್ರಮ’, ‘ಗಮನ’, ‘ಅನೇಕ’, ‘ಈ ಭೂಮಿಯಿಂದ ಆ ಆಕಾಶದವರೆಗೆ’, ‘ಮರಳಿ ಬರಲಿದೆ ಸಮಾಜವಾದ’, ‘ವಸಿಷ್ಠರು ಮತ್ತು ವಾಲ್ಮೀಕಿಯರು’, ‘ಹಣತೆ’(ಜಿಎಸ್ಸೆಸ್ ಅಭಿನಂದನೆ ಗ್ರಂಥ), ‘ಗಾಂಧಿ ಕಥನ’ ಸೇರಿದಂತೆ ಹಲವು ಮಹತ್ವದ ಕೃತಿಗಳನ್ನು ರಚಿಸಿದ್ದಾರೆ. ನಿವೃತ್ತಿಯ ಬಳಿಕ ಅವರು ತಮ್ಮ ಪತ್ನಿ ಸವಿತಾ ನಾಗಭೂಷಣ ಅವರೊಂದಿಗೆ ಶಿವಮೊಗ್ಗದ ಕಲ್ಲಹಳ್ಳಿಯಲ್ಲಿ ನೆಲೆಸಿದ್ದರು.

https://www.facebook.com/savithanagabhushana.smg.52/posts/1211728299577400

Leave a Reply

Your email address will not be published. Required fields are marked *