ಜಿಬಿಡಿಎ ಟೌನ್‌ಶಿಪ್‌ ಅಧಿಕಾರಿಗಳ‌ ಕಾರಿಗೆ ಪೊರೆಕೆ ಏಟು

ರಾಮನಗರ: ಜಿಬಿಡಿಎ ಟೌನ್‌ಶಿಪ್ ಯೋಜನೆಗೆ ಭೂಸ್ವಾಧೀನ ಸಂಬಂಧ ವಿರೋಧ ಮತ್ತಷ್ಟು ತೀವ್ರಗೊಂಡಿದೆ. ಮಂಡಲಹಳ್ಳಿ ಗ್ರಾಮದಲ್ಲಿ ಜಂಟಿ ಅಳತೆ (ಜೆಎಂಸಿ) ಮತ್ತು ಸರ್ವೇ ಕಾರ್ಯಕ್ಕೆ ಬಂದಿದ್ದ ಜಿಬಿಡಿಎ ಅಧಿಕಾರಿಗಳ ತಂಡವನ್ನು ರೈತರು ಮತ್ತು ಮಹಿಳೆಯರು ತಡೆದು ಅಧಿಕಾರಿಗಳ ಕಾರಿಗೆ ಪೊರಕೆಯಿಂದ ಹೊಡೆದು ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಸೋಮವಾರ ನಡೆದಿದೆ.

ಕಳೆದ 490 ದಿನಕ್ಕೂ ಹೆಚ್ಚು ದಿನಗಳಿಂದ ಜಿಬಿಡಿಎ ಟೌನ್​ಶಿಪ್ ಅನ್ನು ವಿರೋಧಿಸುತ್ತಿರುವ ಸ್ಥಳೀಯ ರೈತರ ಆಕ್ರೋಶ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ರೈತರ ವಿರೋಧದ ನಡುವೆಯೂ ಬಿಡದಿ ತಾಲ್ಲೂಕಿನ ಮಂಡಲಹಳ್ಳಿ ಗ್ರಾಮದಲ್ಲಿ ಜೆಎಂಸಿ ಸರ್ವೆಗೆ ಮುಂದಾದ ಜಿಬಿಡಿಎ ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶ ಹೊರಹಾಕಿದ್ದಾರೆ. ಯಾವುದೇ ಕಾರಣಕ್ಕೂ ಜೆಎಂಸಿ ಸರ್ವೇ ನಡೆಸದಂತೆ ಮಂಡಲಹಳ್ಳಿ ಗ್ರಾಮದ ರೈತರು ಒತ್ತಾಯಿಸಿದ್ದಾರೆ. ಬಲವಂತವಾಗಿ ಸರ್ವೇ ಕಾರ್ಯ ನಡೆಸಿದ್ರೆ ಅಧಿಕಾರಿಗಳಿಗೆ ಪೊರಕೆ ಏಟು ಕೊಡುವ ಎಚ್ಚರಿಕೆಯನ್ನೂ ಸಹ ನೀಡಿದ್ದಾರೆ.

ರೈತರು, ಗ್ರಾಮದ ಮಹಿಳೆಯರ ಎಚ್ಚರಿಕೆ ಹೊರತಾಗಿಯೂ ಸರ್ವೇ ನಡೆಸಲು ಮುಂದಾದ ಅಧಿಕಾರಿಗಳಿಗೆ ರೈತ ಮಹಿಳೆಯರು ಪೊರಕೆ ಏಟು ಕೊಟ್ಟಿದ್ದಾರೆ.‌ ಪೊಲೀಸ್ ಭದ್ರತೆಯೊಂದಿಗೆ ಬಂದ ಅಧಿಕಾರಿಗಳಿಗೆ ಹಾಗೂ ಅವರ ವಾಹನಗಳಿಗೆ ಪೊರಕೆಯಿಂದ ಹೊಡೆದು, ಇಟ್ಟಿಗೆ ಹಾಗೂ ಕಲ್ಲು ತೂರಾಟ ನಡೆಸಿದ ಪರಿಣಾಮ ಎರಡು ಕಾರುಗಳು ಜಖಂಗೊಂಡಿದ್ದು, ಗಾಜುಗಳು ಪುಡಿಪುಡಿಯಾಗಿವೆ ಎನ್ನಲಾಗಿದೆ.

ಜೆಎಂಸಿ ಸರ್ವೇ ಮಾಡಲು ಇಂದು ಜಿಬಿಡಿಎ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಗ್ರಾಮಕ್ಕೆ ಬಂದಿದ್ದರು. ಆದರೆ ರೈತರು ಯಾವುದೇ ಕಾರಣಕ್ಕೂ ಸರ್ವೇ ಮಾಡಲು ಅನುಮತಿ ನೀಡಲಿಲ್ಲ. ಅಧಿಕಾರಿಗಳು ಎಷ್ಟೇ ಮನವಿ ಮಾಡಿದರೂ ರೈತರು ಕೇಳಲಿಲ್ಲ. ರೈತರ ತೀವ್ರ ವಿರೋಧದ ಹೊರತಾಗಿಯೂ ಸರ್ವೆಗೆ ಮುಂದಾದ ಅಧಿಕಾರಿಗಳ ಕಾರನ್ನು ಸುತ್ತುವರಿದು, ರೈತ ಮಹಿಳೆಯರು ಪೊರಕೆ ಏಟು ಕೊಟ್ಟಿದ್ದಾರೆ.

ಸ್ಥಳದಲ್ಲಿ ಪೊಲೀಸರು ಇದ್ದರೂ ರೈತರ ಆಕ್ರೋಶ ತಡೆಯಲು ಸಾಧ್ಯವಾಗಲಿಲ್ಲ. ಪೊಲೀಸರನ್ನು ಲೆಕ್ಕಿಸದೇ ರೈತರು ಅಧಿಕಾರಿಗಳ ಕಾರಿಗೆ ಮುತ್ತಿಗೆ ಹಾಕಿ ಪೊರಕೆಯಲ್ಲಿ ಹೊಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಕೆಲ ಆಗಂತುಕರು ಕಲ್ಲು ತೂರಿದ್ದಾರೆ ಎಂದು ಬೈರಮಂಗಲ-ಕಂಚುಗಾರನಹಳ್ಳಿ ಭೂ ಹಿತರಕ್ಷಣಾ ಸಂಘದ ರೈತ ಮುಖಂಡರು ಆರೋಪಿಸಿದ್ದಾರೆ.

ಸದ್ಯ ಸ್ಥಳದಲ್ಲಿ ಬಿಗುವಿನ ವಾತಾವರಣ ಮನೆ ಮಾಡಿದ್ದು,ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಮಾಡಬೇಡಿ. ಕಾನೂನು ಕೈಗೆತ್ತಿಕೊಳ್ಳುವ ಕೆಲಸ ಮಾಡಬೇಡಿ ಎಂದು ರೈತರಿಗೆ ಪೊಲೀಸರು ಮನವಿ ಮಾಡಿದ್ದಾರೆ. ಈ ಘಟನೆ ಬೆನ್ನಲ್ಲೇ ಸ್ಥಳಕ್ಕೆ ಭೇಟಿ ನೀಡಿದ ಎಸ್ಪಿ ಶ್ರೀನಿವಾಸ ಗೌಡ ಅವರು ರೈತರ ಜೊತೆಗೆ ಮಾತುಕತೆ ನಡೆಸಿದ್ದಾರೆ. ಎಎಸ್ಪಿ ರಾಮಚಂದ್ರಯ್ಯ, ಡಿವೈಎಸ್ಪಿ ಗಿರೀಶ್, ಶ್ರೀನಿವಾಸ್ ರಿಂದ ಮಾಹಿತಿ ಪಡೆದು ಸ್ಥಳದಲ್ಲೇ ಬೀಡುಬಿಟ್ಟಿದ್ದಾರೆ

Leave a Reply

Your email address will not be published. Required fields are marked *