ದೆಹಲಿ: ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಇಂದು ದೆಹಲಿಯ ಕರ್ನಾಟಕ ಭವನದಲ್ಲಿ ರಾಜ್ಯದ ಹಿರಿಯ ಐಎಎಸ್, ಐಪಿಎಸ್ ಹಾಗೂ ಐಎಫ್ಎಸ್ ಅಧಿಕಾರಿಗಳ ಜೊತೆ ಔತಣಕೂಟ ಸಭೆ ನಡೆಸಿ, ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿದ ಹಲವು ಪ್ರಮುಖ ವಿಚಾರಗಳನ್ನು ಪ್ರಸ್ತಾಪಿಸಿದರು.
ಸರ್ಕಾರಿ ಅಧಿಕಾರಿಗಳ ಶಕ್ತಿ ಅದಮ್ಯ. ನೀವು ಮನಸ್ಸು ಮಾಡಿದರೆ ಅಭಿವೃದ್ಧಿ ರಥ ಮುನ್ನುಗ್ಗುತ್ತದೆ. ಹೀಗಾಗಿ ಕರ್ನಾಟಕದ ಸರ್ವತೋಮುಖ ಪ್ರಗತಿಗೆ ಕೈಜೋಡಿಸಬೇಕು ಎಂದು ಕರೆ ನೀಡಿದ ಮುಖ್ಯಮಂತ್ರಿಗಳು, ನಿಮ್ಮಲ್ಲಿ ಅಪಾರ ಜ್ಞಾನ ಸಂಪತ್ತಿದೆ, ಸಾಮರ್ಥ್ಯ ಇದೆ. ನಿಮ್ಮಲ್ಲಿರುವ ಆಗಾಧ ಪ್ರತಿಭೆಯನ್ನು ಕರ್ನಾಟಕದ ಪ್ರಗತಿಗೆ ವಿನಿಯೋಗಿಸಿ. ನಿಮಗೆ ಬೇಕಾದ ಸಹಕಾರವನ್ನು ಸರಕಾರ ನೀಡಲಿದೆ ಎಂಬ ಭರವಸೆಯನ್ನು ನೀಡಿದರು.
ಕೇಂದ್ರ ಸರಕಾರದ ಅನೇಕ ಯೋಜನೆಗಳ ಲಾಭ ರಾಜ್ಯಕ್ಕೆ ದೊರೆಯುವಂತೆ ಮಾಡುವಲ್ಲಿ ನಿಮ್ಮ ಸಹಕಾರ ಬಹುಮುಖ್ಯ. ಕರ್ನಾಟಕದಲ್ಲಿರುವ ನಿಮ್ಮದೇ ಸಹೋದ್ಯೋಗಿಗಳ ಜತೆ ನಿರಂತರ ಸಂಪರ್ಕ, ಸಮಾಲೋಚನೆ ನಡೆಸಿ ಅಭಿವೃದ್ಧಿ ಯೋಜನೆಗಳನ್ನು ರೂಪಿಸಿ. ಬಾಕಿ ಇರುವ ಯೋಜನೆಗಳ ತ್ವರಿತ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದರು.
ನೀವು 35 ವರ್ಷ ಸೇವೆಯಲ್ಲಿರುತ್ತಿರಿ. ನಾವು ರಾಜಕಾರಣಿಗಳು ಐದು ವರ್ಷಕ್ಕೊಮ್ಮೆ ಹಗ್ಗಜಗ್ಗಾಟ ನಡೆಸುತ್ತೇವೆ. ಆದರೆ ಒಂದು ಸರಕಾರಕ್ಕೆ ಉತ್ತಮ ಹೆಸರು ತರುವ ಶಕ್ತಿ ನಿಮ್ಮ ಕೈಯಲ್ಲೇ ಇದೆ. ನಾನು ಅಧಿಕಾರಕ್ಕಾಗಿ ಅಧಿಕಾರ ಮಾಡುವವನಲ್ಲ. ಏನಾದರೂ ಸಾಧನೆ ಮಾಡಬೇಕೆಂಬ ಛಲಕ್ಕೆ ಅಧಿಕಾರ ಬಳಸುವವನು. ನಿಮ್ಮ ಸಹಕಾರ ಇದ್ದರೆ ಸಾಧನೆ ಅಸಾಧ್ಯವಲ್ಲ ಎನ್ನುವ ವಿಶ್ವಾಸದ ಮಾತುಗಳನ್ನು ಆಡಿದರು.